Karnataka Postal Department: ವಸಂತ ಕಾಲ ಆರಂಭವಾಗಿದೆ. ಎಲ್ಲೆಡೆ ಗಿಡ-ಮರಗಳು ಚಿಗುರೊಡೆಯಲು ಶುರುವಾಗಿದೆ. ಜೊತೆಗೆ ಎಲ್ಲರ ಪ್ರೀತಿಯ, ಅಚ್ಚು ಮೆಚ್ಚಿನ ಮಾವು(Mango) ಕೂಡ ಮಾಗಿ, ಹಣ್ಣಾಗಿ ಜನರ ಬಾಯಲ್ಲಿ ನೀರೂರಿಸುತ್ತಿದೆ. ಮಾರುಕಟ್ಟೆಯಲ್ಲಿ ಹಣ್ಣು ಲಭ್ಯವಿದ್ದು ಅನೇಕರು ಕೊಂಡು ತಿನ್ನುತ್ತಿದ್ದಾರೆ. ಆದರೆ ಬಿಸಿಲ ಬೇಗೆಗೆ ಜನ ಹೊರ ಹೋಗಲು ಹೆದರುತ್ತಿದ್ದು, ಆನ್ಲೈನ್ ಮೂಲಕ ಹಣ್ಣು ಕೊಂಡು ತಿನ್ನುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಅಂಚೆ ಇಲಾಖೆ(Karnataka Postal Department) ಕೂಡ ದೇಶದ ಜನರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ಹಣ್ಣುಗಳ ರಾಜನ ಪ್ರಿಯರಿಗಾಗಿಯೇ ಅಂಚೆ ಇಲಾಖೆ ಸೇವೆಗೆ ಸಿದ್ಧವಾಗಿದ್ದು, ಪ್ರತಿ ವರ್ಷದಂತೆಯೇ ಈ ಬಾರಿಯೂ ಅಂಚೆ ಇಲಾಖೆ ಮಾವಿನ ಹಣ್ಣನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಸಿದ್ಧವಾಗಿದೆ. ಹೀಗಾಗಿ ಗ್ರಾಹಕರು ಇನ್ನುಮುಂದೆ ಮನೆಯಲ್ಲಿ ಕೂತು ಆರಾಮಾಗಿ ಅಂಚೆ ಮೂಲಕ ಮಾವು ಆರ್ಡರ್ ಮಾಡಿ, ಸವಿಯಬಹುದಾಗಿದೆ.
ಏನಿದು ಯೋಜನೆ?
2019 ರಿಂದ ಅಂಚೆ ಇಲಾಖೆಯು ಮಾವಿನ ಸೀಸನ್‌ನಲ್ಲಿ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುವ ಸೇವೆ ನೀಡಿತ್ತಿದೆ. ಕರ್ನಾಟಕದ ಅಂಚೆ ಇಲಾಖೆಯು ವಿವಿಧ ಮಾವು ಬೆಳೆಗಾರರು ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನೊಂದಿಗೆ ಜಂಟಿಯಾಗಿ ಮಾವಿನ ಹಣ್ಣುಗಳ ಡೋರ್ ಡೆಲಿವರಿ ಸೇವೆ ಆರಂಭಿಸಿದೆ.
ಮಾವು ಬೆಳೆದ ರೈತರು 3 ಕೆಜಿ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ (ಜಿಪಿಒ) ಗೆ ತರುತ್ತಾರೆ. ಬಾಕ್ಸ್‌ಗಳನ್ನು ವ್ಯಾಪಾರದ ಪಾರ್ಸೆಲ್‌ಗಳಾಗಿ ಕಾಯ್ದಿರಿಸಲಾಗುತ್ತದೆ. ಅದೇ ದಿನ ಅಥವಾ ಮರುದಿನ ಪೋಸ್ಟ್‌ಮ್ಯಾನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹಣ್ಣಿನ ಬಾಕ್ಸ್‌ಗಳನ್ನು ತಲುಪಿಸಲಾಗುತ್ತದೆ.
ಮಾವಿನ ಹಣ್ಣು ಬುಕ್ ಮಾಡುವುದು ಹೇಗೆ?
* ತಾಜಾ ಮಾವಿನ ಹಣ್ಣುಗಳನ್ನು ಖರೀದಿಸುವ ಗ್ರಾಹಗಕರು www.karsirimangoes.karnataka.gov.in ಅಥವಾ www.kolaramangoes.com. ಪೋರ್ಟಲ್‌ಗಳ ಮೂಲಕ ಮಾವಿನ ಹಣ್ಣುಗಳನ್ನು ಆರ್ಡರ್ ಮಾಡಬಹುದಾಗಿದೆ.
* ಗ್ರಾಹಕರು ಕನಿಷ್ಠ ಮೂರು ಕೆ.ಜಿ ಹಣ್ಣುಗಳನ್ನು ಆರ್ಡರ್ ಮಾಡಬೇಕು. ಮೂರು ಕೆಜಿ ಬಾಕ್ಸ್ ಗೆ 850 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ.
* ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಲಾಗಿನ್ ಆಗಿ ಮಾವಿನ ಹಣ್ಣನ್ನು ಸೆಲೆಕ್ಟ್ ಮಾಡಬೇಕು. ಅದರ ದರ ಎಲ್ಲವನ್ನು ಪರಿಶೀಲಿಸಿ ಆನ್‌ಲೈನ್‌ನಲ್ಲಿಯೇ ಹಣ ಪಾವತಿ ಮಾಡಿದರೇ ಒಂದೇ ದಿನದಲ್ಲಿ ಮಾವಿನಹಣ್ಣು ನಿಮ್ಮ ಮನೆ ಬಾಗಿಲಿಗೆ ಅಂಚೆ ಇಲಾಖೆ ಸಿಬ್ಬಂದಿ ತಲುಪಿಸುತ್ತಾರೆ.
ಇದನ್ನೂ ಓದಿ: ಸಮೋಸಾದಲ್ಲಿ ಆಲೂಗಡ್ಡೆ ಬದಲು ಕಾಂಡೋಮ್, ತಂಬಾಕು, ಗುಟ್ಕಾ, ಕಲ್ಲುಗಳು ಪತ್ತೆ; ಕೇಸು ದಾಖಲು
