Mangaluru: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಬಳಿ ಗುಂಪು ಹಲ್ಲೆಯಿಂದ ಕೇರಳದ ವ್ಯಕ್ತಿ ಮೃತಪಟ್ಟ ಘಟನೆ ಸಂಬಂಧಪಟ್ಟಂತೆ ಗುರುವಾರ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೀಪ್ ಕುಮಾರ್ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ʼಪಾಕಿಸ್ತಾನ ಪಾಕಿಸ್ತಾನʼ ಬೊಬ್ಬೆ ಹೊಡೆದಿದ್ದೇ ಈ ಘಟನೆಗೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಕ್ರಿಕೆಟ್ ಪಂದ್ಯದ ವೇಳೆ ಕೇರಳದ ವ್ಯಕ್ತಿ ಮೊಹಮ್ಮದ್ ಅಶ್ರಫ್, ʼಪಾಕಿಸ್ತಾನ ಪಾಕಿಸ್ತಾನʼ ಎಂದು ಘೋಷಣೆ ಕೂಗಿದ್ದ. ಆಗ ಸ್ಥಳದಲ್ಲಿದ್ದವರು ಆತನನ್ನು ಬೆನ್ನಟ್ಟಿ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಮತ್ತೆ ಮೂವರನ್ನು ಬಂಧನ ಮಾಡಿದ್ದಾರೆ. ಬಂಧಿತರ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ.
ಎ.27 ರಂದು ಭಾನುವಾರ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಮಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೇರಳದ ವಯನಾಡಿನ ಮನವಂತವಾಡಿಯ ಪುಲ್ಪಲ್ಲಿ ನಿವಾಸಿ ಮೊಹಮ್ಮದ್ ಅಶ್ರಫ್ ಅಲ್ಲಿಗೆ ಬಂದಿದ್ದು, ಗಲಾಟೆ ಸಂಭವಿಸಿ ಹಲ್ಲೆ ನಡೆದಿತ್ತು. ಗಾಯಗೊಂಡಿದ್ದ ಆತ ಮರುದಿನ ಸಾವಿಗೀಡಾಗಿದ್ದ.
ಪಾಕಿಸ್ತಾನದ ಪರ ಯಾರೇ ಘೋಷಣೆ ಕೂಗಿದರೂ ಅದು ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಗುಂಪು ಹಲ್ಲೆ ಪ್ರಕರಣದ ತಪ್ಪಿಸ್ಥರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
