Uttar Pradesh: 9 ವರ್ಷದ ಬಾಲಕನೋರ್ವ ಭಯದಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಎಟಾಹ್ ಜಿಲ್ಲೆಯ ಜಿಐಐಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ರಾಜು ಎಂಬುವವರ ಮಗ ಆರ್ಯನ್ ಮನೆಯಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ರೊಟ್ಟಿಯ ತುಂಡನ್ನು ತೆಗೆದುಕೊಂಡು ಇತರ ಮಕ್ಕಳು ಆಡುತ್ತಿದ್ದ ಕೋಣೆಗೆ ಹೋಗಿ ಅಲ್ಲಿ ಆಟ ಆಡಲು ಪ್ರಾರಂಭ ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ ಎಲ್ಲಾ ಮಕ್ಕಳು ಆ ಕೋಣೆಯಿಂದ ಹೊರ ಹೋಗಿದ್ದಾರೆ. ಆದರೆ ಆರು ವರ್ಷದ ಬಾಲಕಿಯೊಬ್ಬಳು ಬಾಗಿಲನ್ನು ಸ್ವಲ್ಪ ಮುಚ್ಚಿ, ಆರ್ಯನ್‌ನನ್ನು ಹೆದರಿಸಲೆಂದು ಹಠಾತ್ ಶಬ್ದ ಮಾಡಿದ್ದಾಳೆ.
ಈ ಶಬ್ದ ಕೇಳಿ ಆರ್ಯನ್ ಹೆದರಿ ನೆಲಕ್ಕೆ ಬಿದ್ದು ಪ್ರಜ್ಞಾಹೀನನಾಗಿದ್ದಾನೆ. ಕೂಡಲೇ ಮನೆಮಂದಿ ಆರ್ಯನ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ವೈದ್ಯರ ಪ್ರಕಾರ ಬಾಲಕ ಹೃದಯಾಘಾತದಿಂದ ಮಗು ಮೃತಪಟ್ಟಿದೆ.
ಇಂತಹ ಘಟನೆಯಿಂದ ಹೃದಯಾಘಾತದಿಂದ ಸಾವಿಗೀಡಾಗುವುದು ಅತ್ಯಂತ ಅಪರೂಪದ ಘಟನೆ ಎಂದು ವೈದ್ಯರು ಹೇಳಿದ್ದಾರೆ. ತಮ್ಮ ಮಗುವಿನ ಸಾವಿನ ಸುದ್ದಿ ಕೇಳಿ ಕುಟುಂಬ ಆಘಾತಕ್ಕೊಳಗಾಗಿದೆ.
