Home » 38 ಮಂಗಗಳ ಮಾರಣಹೋಮದ ಘಟನೆ ಮಾಸುವ ಮುನ್ನವೇ ನಡೆಯಿತು ಮತ್ತೊಂದು ಅಮಾನವೀಯ ಘಟನೆ | ಅಕ್ರಮವಾಗಿ ಕರುಗಳ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿ 50 ಕರುಗಳು ಸಾವು

38 ಮಂಗಗಳ ಮಾರಣಹೋಮದ ಘಟನೆ ಮಾಸುವ ಮುನ್ನವೇ ನಡೆಯಿತು ಮತ್ತೊಂದು ಅಮಾನವೀಯ ಘಟನೆ | ಅಕ್ರಮವಾಗಿ ಕರುಗಳ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿ 50 ಕರುಗಳು ಸಾವು

by ಹೊಸಕನ್ನಡ
0 comments

ಹಾಸನದಲ್ಲಿ ಕಳೆದ ತಿಂಗಳ ಹಿಂದಷ್ಟೇ ನಡೆದ 38 ಮಂಗಗಳ ಮಾರಣಹೋಮದ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಕ್ರಮ ಗೋ ಸಾಗಾಟದ ವೇಳೆ ಅಪಘಾತವಾಗಿ, ಸುಮಾರು 50 ಕರುಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ ಬುಧವಾರ ರಾತ್ರಿ ಪುಟ್ಟ ಗೂಡ್ಸ್ ವಾಹನದಲ್ಲಿ 100 ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಬಾಯಿ, ಕಾಲಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಮೂಕ ಪ್ರಾಣಿಗಳನ್ನು ಸಾಗಿಸುತ್ತಿದ್ದರು. ಗೋಹತ್ಯೆ ನಿಷೇಧ ಇರುವುದರಿಂದ ದುಷ್ಕರ್ಮಿಗಳು ರಾತ್ರೋರಾತ್ರಿ ಸಾಗಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ.

ಗೂಡ್ಸ್ ಆಟೋದೊಳಗೆ ಉಸಿರುಗಟ್ಟಿ ಹಲವು ಕರುಗಳು ಸಾವಪ್ಪಿದ್ದರೆ, ಅಪಘಾತದ ಬಳಿಕ ಮತ್ತಷ್ಟು ಕರುಗಳು ಬಲಿಯಾಗಿವೆ. ಕನಿಷ್ಠ 50 ಮೂಕ ಪ್ರಾಣಿಗಳು ಬಲಿಯಾಗಿದ್ದು, ಉಳಿದ 50 ಕರುಗಳನ್ನು ರಕ್ಷಿಸಲಾಗಿದೆ.

ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಅವರು ಸ್ಥಳಕ್ಕೆ ಹೋಗಿ ಕರುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಘಟನೆ ಬಗ್ಗೆ ತೀವ್ರ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಜುಲೈ 28 ರಂದು 38 ಮಂಗಗಳ ಮಾರಣಹೋಮ ನಡೆದಿತ್ತು. ಘಟನೆ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ಹೈಕೋರ್ಟ್‌ ತನಿಖೆ ನಡೆಸುತ್ತಿದೆ. ಈ ಘಟನೆ ಮಾಸುವ ಮುನ್ನವೇ ಇನ್ನೂ 50 ಮೂಕಪ್ರಾಣಿಗಳ ಸಾವು ಸಂಭವಿಸಿದೆ.

ಪೊಲೀಸರು ಹಾಗೂ ತಾಲೂಕು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

You may also like

Leave a Comment