Police constable : ಸುಮಾರು 15000 ಪೊಲೀಸ್ ಪೇದೆಗಳ ಹುದ್ದೆ ಖಾಲಿ ಇದ್ದು ನೇಮಕಾತಿ ವೇಳಾಪಟ್ಟಿ ಮಾಡಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪೂರ್ಣಗೊಳಿಸಲಾಗಿದೆ. 402 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ 398 ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ 10 ರಿಂದ 15 ಸಾವಿರ ಪೊಲೀಸ್ ಪೇದೆ ಹುದ್ದೆಗಳು ಖಾಲಿ ಇವೆ. ಕೆಎಸ್‌ಆರ್‌ಪಿ, ನಾಗರಿಕ, ಸಶಸ್ತ್ರ ಮೀಸಲು ಪಡೆ ಎಲ್ಲ ನೇಮಕಾತಿಯಾಗಬೇಕು. ಯಾವ ರೀತಿ ನೇಮಕಾತಿ ನಡೆಯಬೇಕು ಎಂಬುದರ ಕುರಿತು ಕೆಲ ಸೂಚನೆಗಳನ್ನು ನೀಡಿದ್ದೇನೆ. ವಿವರವಾದ ಚರ್ಚೆಗಳನ್ನು ಮಾಡಿ ಏನೆಲ್ಲ ಸೂಚನೆಗಳನ್ನು ಕೊಡಬೇಕು, ಕೊಟ್ಟಿದ್ದೇನೆ ಎಂದು ಹೇಳಿದರು.
ಅಲ್ಲದೆ ರೌಡಿಗಳು ಪುಂಡಾಟ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ, ಬ್ಯಾಂಕ್ ದರೋಡೆ ಪ್ರಕರಣಗಳ ತನಿಖೆಯ ಬಗ್ಗೆ ಅಧಿಕಾರಿಗಳೊಂದಿಗೆ ಕೂಲಂಕುಶವಾಗಿ ಚರ್ಚೆ ಮಾಡಲಾಗಿದೆ. ಡ್ರಗ್ಸ್ ದಂಧೆಯ ಜೊತೆ ನಂಟು ಹೊಂದಿದ್ದ ಇನ್‌ಸ್ಪೆಕ್ಟರ್ ಸೇರಿ 11 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ತತಕ್ಷಣ ಇಲಾಖಾ ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು
