ನವದೆಹಲಿ: ಆದಾಯ ತೆರಿಗೆ ರಿಟರ್ನ್ (IT Returns) ಸಲ್ಲಿಕೆಯಲ್ಲಿ ತಪ್ಪು ಮಾಹಿತಿ ನೀಡುವ ಮತ್ತು ಆದಾಯ ಮರೆಮಾಚಿ ತೆರಿಗೆ ವಂಚಿಸುವ ವ್ಯಕ್ತಿ ಸಂಸ್ಥೆಗಳಿಗೆ ಆದಾಯ ತೆರಿಗೆ ಇಲಾಖೆ (Income Tax Department) ಕಠಿಣ ಎಚ್ಚರಿಕೆ ನೀಡಿದೆ.
ಇದೀಗ ಹೊಸ ಆದಾಯ ತೆರಿಗೆ ನಿಯಮಗಳು ಜಾರಿಗೆ ಬಂದಿದ್ದು, ತೆರಿಗೆದಾರರು ಸುಳ್ಳು ಲೆಕ್ಕಪತ್ರಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಅಂಥವರಿಗೆ 200%ರವರೆಗೆ ದಂಡ, ಮತ್ತು ವಾರ್ಷಿಕ 24% ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ, ಅಂಥ ವ್ಯಕ್ತಿಗಳಿಗೆ ಸೆಕ್ಷನ್ 276 ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
ವ್ಯಕ್ತಿಗಳು ಅಲ್ಲದೆ, ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು ಕೂಡಾ ತಪ್ಪು ಮಾಡಿದರೂ, ಕಾನೂನಿನ ಪ್ರಕಾರ ತೆರಿಗೆದಾರರಾದ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈಗ ನೀಡಿರುವ ಹೊಸ ಕಠಿಣ ನಿಯಮಗಳು ಯಾವುದೇ ವಿನಾಯಿತಿ ಇಲ್ಲದೇ ಎಲ್ಲರಿಗೂ ಅನ್ವಯಿಸಲಿದ್ದು, ಸಂಬಳದ ನೌಕರರು, ಫ್ರೀಲ್ಯಾನ್ಸರ್ ವೃತ್ತಿದಾರರು, ಡಾಕ್ಟರರು, ವಕೀಲರು ಸೇರಿದಂತೆ ಇನ್ನಿತರ ವೃತ್ತಿಪರರು ಜತೆಗೆ ಉದ್ಯಮಿಗಳಿಗೂ ಕೂಡಾ ಈ ಎಚ್ಚರಿಕೆ ಅನ್ವಯಿಸುತ್ತದೆ.
