Alahabada Court: ಮಹಿಳೆಯರ ಸ್ತನಗಳನ್ನು ಹಿಡಿಯುವುದು ಅಥವಾ ಅವರು ಧರಿಸಿದ ಪ್ಯಾಂಟ್, ಪೈಜಾಮವನ್ನು ಎಳೆಯುವುದು, ಅವುಗಳ ದಾರವನ್ನು ಹಿಡಿಯುವುದು ಅತ್ಯಾಚಾರ ಅಥವಾ ಅತ್ಯಾಚಾರಕ್ಕೆ ಯತ್ನ ಆಗುವುದಿಲ್ಲ ಎಂದು ಅಲಹಾಬಾದ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ
ಹೌದು, ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಕೋರ್ಟ್ ಈ ಮಹತ್ವದ ತೀರ್ಪು ನೀಡಿದ್ದು, ಸಂತ್ರಸ್ತೆಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮ ದಾರ ಅಥವಾ ಪ್ಯಾಂಟ್ ಎಳೆಯುವುದು ತೀವ್ರವಾದ ಲೈಂಗಿಕ ದೌರ್ಜನ್ಯ ಆಗುತ್ತದೆಯೇ ಹೊರತು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ. ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಪೊಲೀಸ್ ಠಾಣೆ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರ ಪೀಠವು ಈ ತೀರ್ಪು ನೀಡಿದೆ.
ಏನಿದು ಪ್ರಕರಣ?
ಕಾಸ್ಗಂಜ್ ಜಿಲ್ಲೆಯ ಪಟಿಯಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದು, ಪವನ್ ಮತ್ತು ಆಕಾಶ್ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಮಯದಲ್ಲಿ, ಆಕಾಶ್ ಬಲಿಪಶುವಿನ ಪೈಜಾಮಾದ ದಾರ ಕತ್ತರಿಸಿ ಎಳೆಯಲು ಪ್ರಯತ್ನಿಸಿದನು. ಆದರೆ, ಈ ವೇಳೆ ದಾರಿಹೋಕರು ಬರುತ್ತಿದ್ದಂತೆಯೇ ಅವರು ಅಲ್ಲಿಂದ ಪರಾರಿಯಾಗಿದ್ದರು. ಇಬ್ಬರ ವಿರುದ್ಧ ಅಂದು ಪೊಲೀಸ್ ದೂರು ದಾಖಲಾಗಿತ್ತು.
ಬಳಿಕ ಆರೋಪಿಗಳ ವಿರುದ್ಧ ಈ ಹಿಂದೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 18 (ಅಪರಾಧ ಎಸಗುವ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್ ಆರೋಪಿಗಳ ವಿರುದ್ಧದ ಆರೋಪಗಳನ್ನು ತಿದ್ದುಪಡಿ ಮಾಡಿದ್ದು, ಆರೋಪಗಳನ್ನು ಹೊಸ ದೃಷ್ಟಿಕೋನದಿಂದ ನೋಡಿದೆ. ಈ ಪ್ರಕರಣದಲ್ಲಿ ಅತ್ಯಾಚಾರ ಯತ್ನದ ಆರೋಪ ನಿಲ್ಲುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
