Nandini: ದೇಶದಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಪರೀಷ್ಕರಣೆ ಮಾಡಿದ ಬಳಿಕ ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. ಸೆಪ್ಟೆಂಬರ್ 22ರ ಬಳಿಕ ಇವುಗಳ ಲಾಭ ಜನರಿಗೆ ತಲುಪಲಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದ ಬ್ರಾಂಡ್ ಆದ ನಂದಿನಿ ಕೂಡ ತನ್ನ ಹಲವು ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡಲು ನಿರ್ಧರಿಸಿದೆ.
ಹೌದು, ಕೇಂದ್ರ ಸರ್ಕಾರವು ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ 5ಕ್ಕೆ ಇಳಿಕೆ ಮಾಡಿರುವುದರಿಂದ ಸೆ.22ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ‘ನಂದಿನಿ’ಯ ವಿವಿಧ ಉತ್ಪನ್ನಗಳ ದರ ಕಡಿಮೆಯಾಗಲಿದೆ. ಇದರ ಕುರಿತಾಗಿ KMF ನ ಹಿರಿಯ ಅಧಿಕಾರಿಗಳ ಇಂದು ಸಭೆ ನಡೆಯಲಿದ್ದು, ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೊಳಿಸುವಂತೆ ಮಾರಾಟಗಾರರಿಗೆ ಸೂಚಿಸಲಾಗುವುದು ಎಂದು ತಿಳಿದುಬಂದಿದೆ.
ಕೆಎಂಎಫ್ ದರ ಪರಿಷ್ಕರಣೆಯ ಬಳಿಕ ಮೊಸರಿನ ದರ ಲೀಟರ್‌ಗೆ ₹4ರವರೆಗೆ ಕಡಿಮೆ ಆಗುವ ನಿರೀಕ್ಷೆಯಿದೆ. ಇದರೊಂದಿಗೆ ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಯೂ ಕೂಡ ತುಂಬಾ ಕಡಿಮೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇನ್ನು ‘ಜಿಎಸ್‌ಟಿ ಇಳಿಕೆ ಸಂಬಂಧ ಸೂಚನೆ ಬಂದಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಆದೇಶ ಜಾರಿ ಮಾಡಲಾಗುತ್ತದೆʼ ಎಂದು ಮಹಾಮಂಡಳಿ ತಿಳಿಸಿದೆ.
