Gujarat News: ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಾಲ್ವರು ಮಕ್ಕಳು ಒಟ್ಟಿಗೆ ಸಾವನ್ನಪ್ಪಿದ್ದಾರೆ. ಹಬ್ಬ ಹರಿದಿನಗಳಲ್ಲಿ ಕೂಲಿ ಕಾರ್ಮಿಕ ಕುಟುಂಬ ಶೋಕದಲ್ಲಿ ಮುಳುಗಿದೆ.
ಮಕ್ಕಳ ಪಾಲಕರು ಜಮೀನಿನ ಕೆಲಸಕ್ಕೆ ಹೋಗಿದ್ದು, ಆಟವಾಡುವ ಉದ್ದೇಶದಿಂದ ಮಕ್ಕಳು ಆಟವಾಡಲು ತೋಟದ ಮಾಲೀಕರ ಕಾರು ಹತ್ತಿದ್ದಾರೆ. ಇನ್ನೊಂದು ಬದಿಯಿಂದ ಬಾಗಿಲಿಗೆ ಬೀಗ ಬಿದ್ದಿದ್ದು, ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ನಾಲ್ಕು ಮಕ್ಕಳು ಸತ್ತಿದ್ದು ಹೇಗೆ?
ಸೋಮವಾರ ಸಂಜೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಚಿರಾಗ್ ದೇಸಾಯಿ, ಘಟನೆ ಶನಿವಾರ ಸಂಜೆ ನಡೆದಿದೆ. ಅಮ್ರೇಲಿಯ ರಂಧಿಯಾ ಗ್ರಾಮದಲ್ಲಿ ಪ್ರಾಣ ಕಳೆದುಕೊಂಡ ಮಕ್ಕಳು ಮಧ್ಯಪ್ರದೇಶ ಮೂಲದ ಕೃಷಿ ಕಾರ್ಮಿಕ ದಂಪತಿಗೆ ಸೇರಿದವರು.
ಮಕ್ಕಳ ಪಾಲಕರು ತಮ್ಮ ಏಳು ಮಕ್ಕಳನ್ನು ಬೆಳಗ್ಗೆ 7:30ರ ಸುಮಾರಿಗೆ ಮನೆಯಲ್ಲಿ ಬಿಟ್ಟು ಭರತ್ ಮಂದನಿ ಅವರ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದರು. ಏಳು ಮಕ್ಕಳಲ್ಲಿ ನಾಲ್ವರು ಆಟವಾಡಲು ಮನೆಯ ಬಳಿ ನಿಲ್ಲಿಸಿದ್ದ ತೋಟದ ಮಾಲೀಕರ ಕಾರಿನೊಳಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಚಾನಕ್ ಆಗಿ ಕಾರಿನ ಡೋರ್ ಲಾಕ್ ಆಗಿದ್ದು, ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ನಾಲ್ವರು ಮಕ್ಕಳ ವಯಸ್ಸು 2 ರಿಂದ 7 ವರ್ಷ ಎಂದು ಹೇಳಲಾಗಿದೆ.
ಶನಿವಾರ ಸಂಜೆ ಮಕ್ಕಳ ಪೋಷಕರು ಮತ್ತು ತೋಟದ ಮಾಲೀಕರು ಹಿಂತಿರುಗಿದಾಗ ಕಾರಿನಲ್ಲಿದ್ದ ನಾಲ್ವರು ಮಕ್ಕಳ ಶವಗಳನ್ನು ನೋಡಿದ್ದಾರೆ. ತಮ್ಮ ಮಕ್ಕಳ ಶವವನ್ನು ನೋಡಿ ಪೋಷಕರ ರೋದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಅರ್ಮೇಲಿ ಪೊಲೀಸ್ ಠಾಣೆಯಲ್ಲಿ ಅಪಘಾತದಿಂದ ಸಾವು ಪ್ರಕರಣ ದಾಖಲಾಗಿದೆ ಎಂದು ದೇಸಾಯಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
