ವೇಣೂರು: ಗುಂಡೂರಿಯ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಸ್ಥಾಪಕ ಸದಸ್ಯರಾಗಿ, ಭಜಕ ಗುರುವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಮಂಜಪ್ಪ ದೇವಾಡಿಗ ಗೋಳಿದಡ್ಕ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಶ್ರದ್ದಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ತುಂಬೆದಲೆಕ್ಕಿ ಭಜನಾ ಮಂದಿರದ ಸಭಾಂಗಣದಲ್ಲಿ ಜ.18ರಂದು ನಡೆಯಿತು.
ತುಂಬೆದಲೆಕ್ಕಿ ಭಜನಾ ಮಂದಿರದ ಗೌರವ ಸಲಹೆಗಾರ ಲಕ್ಷ್ಮೀನಾರಾಯಣ ಆಚಾರ್ಯ ಸಂಗಬೆಟ್ಟು ನುಡಿನಮನ ಸಲ್ಲಿಸಿ, ಮಂಜಪ್ಪ ದೇವಾಡಿಗರ ಗುಣಗಾನ ಮಾಡಿದರು. ಪ್ರಾಧ್ಯಾಪಕ ಗುಣಪ್ರಸಾದ್ ಕಾರಂದೂರು ಶ್ರದ್ಧಾಂಜಲಿ ಅರ್ಪಿಸಿ, ಸೌಮ್ಯ ಸ್ವಭಾವದ ಮಂಜಪ್ಪ ದೇವಾಡಿಗರು ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಭಜನೆಯನ್ನೇ ಜೀವನವನ್ನಾಗಿಸಿದ ಅವರು ಮಕ್ಕಳಿಗೆ ಸ್ಪೂರ್ತಿದಾಯಕರಾಗಿದ್ದರು, ಅವರ ನಿಧನ ತುಂಬೆದಲೆಕ್ಕಿ ಭಜನ ಮಂಡಳಿಗೆ ತುಂಬಲಾಗದ ನಷ್ಟ ಎಂದರು.
ವೇಣೂರಿನ ಉದ್ಯಮಿ ಹಿರಿಯರಾದ ಕೆ. ಭಾಸ್ಕರ ಪೈ, ಕೆ. ವಿಜಯ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರುಗಳಾದ ಶಾಲಿನಿ, ವೀಣಾ, ಭಜನ ಮಂದಿರದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ, ಲಿಂಗಪ್ಪ ದೇವಾಡಿಗ ಗೋಳಿದಡ್ಕ ಸೇರಿದಂತೆ ಮಂಜಪ್ಪ ದೇವಾಡಿಗರ ಕುಟುಂಬಿಕರು, ಹಿತೈಷಿಗಳು, ಭಜನ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಾರ್ವಜನಿಕರ ಪರವಾಗಿ ಜಯಂಶಕರ ಹೆಗ್ಡೆ ಅವರು ಗುಣಗಾನಗೈದರು. ಹರೀಶ್ ಕುಮಾರ್ ಪೊಕ್ಕಿ ಪ್ರಸ್ತಾವಣೆಗೈದು, ಸಭೆಯನ್ನು ನಿರ್ವಹಿಸಿದರು.













