ಹಾಸನ:ಇಳಿ ಸಂಜೆಯ ಹೊತ್ತಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹಾಸನ ನಗರಸಭೆ ಸದಸ್ಯ ಪ್ರಶಾಂತ್ ಎಂಬವರನ್ನು ದುಷ್ಕರ್ಮಿಗಳ ತಂಡವೊಂದು ಭೀಕರವಾಗಿ ಕೊಚ್ಚಿ ಕೊಲೆ ನಡೆಸಿದ ಘಟನೆ ಹಾಸನ ನಗರದ ಲಕ್ಷ್ಮಿಪುರ ಬಡಾವಣೆಯಲ್ಲಿ ನಡೆದಿದ್ದು, ಸದಸ್ಯನ ಸಾವಿನ ಹಿನ್ನೆಲೆಯಲ್ಲಿ ಇಂದು ಮಾರುಕಟ್ಟೆಗಳೆಲ್ಲಾ ಮುಷ್ಕರ ನಡೆಸಿವೆ.
ನಗರಸಭೆಯ 16ನೇ ವಾರ್ಡ್ ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಪ್ರಶಾಂತ್, ಮನೆಗೆ ತೆರಳುವ ದಾರಿ ಮಧ್ಯೆ ಅಡ್ಡ ಗಟ್ಟಿದ ತಂಡ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಕೊಚ್ಚಿದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಸಹಿತ ಜೆ.ಡಿ.ಎಸ್ ಮುಖಂಡರುಗಳು ಆಗಮಿಸಿದ್ದು, ಆಸ್ಪತ್ರೆಯ ಸುತ್ತ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದಾರೆ.
