Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಂ.2 ನಟ ದರ್ಶನ್‌ನ ಆರೋಗ್ಯ ಸ್ಥಿತಿಯ ವಿಷಯದಲ್ಲಿ ನ್ಯಾಯಾಲಯದ ಹಾದಿ ತಪ್ಪಿಸಲಾಗಿದ್ದು, ವೈದ್ಯಕೀಯ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ತೋರಿದ ಸಹಾನುಭೂತಿಯನ್ನು ದುರ್ಬಳಕೆ ಮಾಡಲಾಗಿದೆ. ಜಾಮೀನು ನೀಡಿ ಐದು ವಾರ ಕಳೆದರೂ ದರ್ಶನ್ ಯಾವುದೇ ಚಿಕಿತ್ಸೆ ಪಡೆದಿಲ್ಲ. ಹಾಗಾಗಿ ಮಧ್ಯಂತರ ಜಾಮೀನು ರದ್ದು ಮಾಡಬೇಕು ಎಂದು ರಾಜ್ಯ ಸರಕಾರ ಬಲವಾಗಿ ಪ್ರತಿಪಾದಿಸಿದೆ.
ಮಧ್ಯಂತರ ಜಾಮೀನಿನಲ್ಲಿ ಉಳಿಯಲು ದರ್ಶನ್ ಅರ್ಹನಲ್ಲ. ಆತ ಶರಣಾಗಬೇಕು. ಜಾಮೀನು ಅರ್ಜಿ ಆಮೇಲೆ ಕೂಡಾ ವಿಚಾರಣೆ ಮಾಡಬಹುದು. ಮುಂದಿನ ವಾರಕ್ಕೆ ಆರು ವಾರ ಮುಗಿಯಲಿದೆ ಎಂದು ರಾಜ್ಯ ಸರಕಾರ ಪರ ವಿಶೇಷ ಸರಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ದಾರೆ.
ಇದರ ಮಧ್ಯೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್, ಮಧ್ಯಂತರ ಜಾಮೀನು ಪ್ರಶ್ನೆ ಮಾಡಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ಹೇಳಿದರು. ಇದಕ್ಕೆ ಸುಪ್ರೀಕೋರ್ಟ್‌ಗೆ ಹಾಕಿದ ಮಾತ್ರಕ್ಕೆ ಇಲ್ಲಿ ವಾದಿಸಬಾರದು ಎಂದೇನಿಲ್ಲ ಎಂದು ನ್ಯಾಯಪೀಠ ಹೇಳಿತು. ನಂತರ ವಿಚಾರಣೆಯಲ್ಲಿ ಡಿ.9 (ಸೋಮವಾರ) ಕ್ಕೆ ಮುಂದೂಡಿತು.
ನಾಳೆಯೇ ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸದಿದ್ದರೆ ದರ್ಶನ್ ಸಾಯುತ್ತಾರೆ, ಲಕ್ವ ಹೊಡೆಯುತ್ತದೆ ಎಂದು ಹೇಳಿ ನ್ಯಾಯಾಲಯದ ದಾರಿ ತಪ್ಪಿಸಿದ್ದು, ಕೋರ್ಟ್ ತೋರಿಸಿದ ಸಹಾನುಭೂತಿಯನ್ನು ದುರ್ಬಳಕೆ ಮಾಡಲಾಗಿದೆ ಎಂದು ಪಿ. ಪ್ರಸನ್ನ ಕುಮಾರ್ ಹೇಳಿದರು.
