Health ATM: ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಎಟಿಎಂ ನಲ್ಲಿ ಹಣ ಡ್ರಾ ಮಾಡುವಂತೆ ಇಡ್ಲಿಯನ್ನು ಡ್ರಾ ಮಾಡುವಂತಹ ಎಟಿಎಂ ಮಷೀನ್ ಒಂದು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಬೆನ್ನಲ್ಲೇ ಸುಮಾರು 60 ರೋಗಗಳ ಪರೀಕ್ಷೆಯನ್ನು ಮಾಡುವಂತಹ ‘ಹೆಲ್ತ್ ಎಟಿಎಂ’ ಒಂದು ಪ್ರತ್ಯಕ್ಷವಾಗಿದೆ.
ಹೌದು, ಇದುವರೆಗೂ ಏನಾದರೂ ಕಾಯಿಲೆ ಬಂದಾಗ ಆಸ್ಪತ್ರೆಗಳಿಗೆ ಹೋಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಅಲ್ಲದೆ ಕೆಲವು ಡಾಕ್ಟರ್ ಬಳಿ ಅಪಾರ್ಟ್ಮೆಂಟ್ ಇಲ್ಲದೆ ಸುಳಿಯಲು ಕೂಡ ಸಾಧ್ಯವಿಲ್ಲ. ಹೀಗಾಗಿ ಕಾದು ಕಾದು ಸುಸ್ತಾಗಿ ಅನೇಕರು ಆಸ್ಪತ್ರೆ ಕಡೆ ಮುಖ ಮಾಡುವುದನ್ನು ಬಿಟ್ಟಿದ್ದರು. ಆದರೆ ಇದೀಗ ಇನ್ನು ಕೆಲವೇ ದಿನಗಳಲ್ಲಿ ಈ ತಲೆ ನೋವಿಗೆ ಗುಡ್ ಬೈ ಹೇಳಲು ಇದೀಗ ಹೆಲ್ತ್ ಎಟಿಎಂ ಒಂದು ಸದ್ದು ಮಾಡುತ್ತಿದೆ. ಹಾಗಿದ್ದರೆ ಏನಿದರ ವೈಶಿಷ್ಟ್ಯ ಎಂದು ತಿಳಿಯೋಣ.
ದೆಹಲಿ ಮೂಲದ ಸ್ಟಾರ್ಟ್‌ಅಪ್ ಕ್ಲಿನಿಕ್ಸ್ ಆನ್ ಕ್ಲೌಡ್ ಈ ಹೆಲ್ತ್ ಎಟಿಎಂ (Health ATM) ಎಂಬ ಹೊಸ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ನೋಡಲು ಬ್ಯಾಂಕ್ ATM ನಂತೆ ಕಾಣುವ ಯಂತ್ರ ಇದಾಗಿದೆ. ಈ ಒಂದೇ ಯಂತ್ರದಲ್ಲಿ ಸುಮಾರು 60 ವಿಧದ ವೈದ್ಯಕೀಯ ಪರೀಕ್ಷೆಗಳನ್ನು (Medical Report) ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟು ಮಾತ್ರವಲ್ಲದೆ ಕೆಲವೇ ನಿಮಿಷಗಳಲ್ಲಿ ಪರೀಕ್ಷೆಯ ವರದಿ ದೊರೆಯುತ್ತದೆ. ಈ ಮೂಲಕ ರೋಗಿಗಳಿಗೆ ರಕ್ತ ಪರೀಕ್ಷೆಯಾದ ಕೆಲವೇ ನಿಮಿಷದಲ್ಲಿ ವರದಿ ಸಿಗುತ್ತದೆ.
ಈ ಯಂತ್ರವನ್ನು ರೋಗಿ ಇದರ ಮೇಲೆ ನಿಂತಿರುವಾಗಲೇ ಹಲವಾರು ರೋಗನಿರ್ಣಯ ಪರೀಕ್ಷೆಗಳನ್ನು ನಿರ್ವಹಿಸುವಂತೆ ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಈಗಾಗಲೇ ಈ ತಂತ್ರಜ್ಞಾನವನ್ನು ತೆಲಂಗಾಣ (Telangana) ಸರ್ಕಾರವು ಕಿಂಗ್ ಕೋಟಿ ಹಾಗೂ ಮಲಕ್ಪೇಟ್ ಏರಿಯಾ ಆಸ್ಪತ್ರೆಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ಈ ಆರೋಗ್ಯ ಎಟಿಎಂ ಅನ್ನು ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ.
ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ತೆಲಂಗಾಣ ಸರ್ಕಾರ ಆರೋಗ್ಯ ಎಟಿಎಂ ಜಾಲವನ್ನು ಇನ್ನಷ್ಟು ಸರ್ಕಾರಿ ಆಸ್ಪತ್ರೆಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಅಷ್ಟೇ ಅಲ್ಲದೆ ಇದು ಸಕ್ಸಸ್ ಆದರೆ ಆಸ್ಪತ್ರೆಗಳಲ್ಲಿ ಜನದಟ್ಟಣೆಯು ಕಡಿಮೆಯಾಗುತ್ತದೆ. ರೋಗಿಗಳಿಗೆ ತಮ್ಮಲ್ಲಿ ಯಾವ ಕಾಯಿಲೆ ಎಂಬುದು ತಟ್ಟನೆ ತಿಳಿದು ಮುಂದಿನ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ.
