Bantwala : ಕ್ವಾರಿಯಲ್ಲಿ ಕಲ್ಲು ಒಡೆಯುವುದಕ್ಕಾಗಿ ತಂದ ಸ್ಫೋಟಕಗಳು ಬಿಸಿಲಿನ ತೀವ್ರತೆಗೆ ಏಕಾಏಕಿ ಸ್ಫೋಟಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಮಾಡತ್ತಡ್ಕದಲ್ಲಿ ನಡೆದಿದ್ದು ವಿಟ್ಲ ಪೇಟೆ ಸೇರಿ ಆಸುಪಾಸಿನ ಜನರನ್ನು ಬೆಚ್ಚಿಬೀಳಿಸಿದೆ.
ಮಾಡತ್ತಡ್ಕ ಎನ್.ಎಸ್. ಕ್ರೆಶರ್ ಗೇ ಸೇರಿದ ಕ್ವಾರಿಯ ಸಮೀಪದಲ್ಲೇ ಘಟನೆ ನಡೆದಿದ್ದು, ಕಲ್ಲಿನ ರಾಶಿಯ ನಡುವಿನಲ್ಲಿ ಒಂದು ಬಾಕ್ಸ್ ಡೆಟೋನೇಟರ್ಸ್ ಹಾಗೂ ೨೦೦ ಜೆಲಿಟಿನ್ ಕಡ್ಡಿಗಳನ್ನು ಒಟ್ಟಿಗೇ ಇಡಲಾಗಿತ್ತೆನ್ನಲಾಗಿದೆ. ಸುಮಾರ್ ೧.೩೦ರ ಸುಮಾರಿಗೆ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ಸ್ಥಳದಿಂದ ಸುಮಾರು ೪ ಕಿ.ಮೀ. ವ್ಯಾಪ್ತಿಯ ಮನೆಗಳಿಗೆ ಹಾನಿಯಾಗಿದ್ದು, ನೂರು ಮೀಟರು ದೂರದಲ್ಲಿರುವ ಎರಡು ಮನೆಗಳ ಛಾವಣಿ, ಕಿಟಕಿ ಸೇರಿ ಹಲವು ವಸ್ತುಗಳು ಜಖಂಗೊಂಡಿದೆ.
ಕೋರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕಲ್ಲಿನ ರಾಶಿಯಿದ್ದು, ಇದರ ತಪ್ಪಲು ಪ್ರದೇಶದಲ್ಲಿ ಯಾರಿಗೂ ಕಾಣದ ರೀತಿಯಲ್ಲಿ ದಾಸ್ತಾನು ಇರಿಸಲಾಗಿದ್ದು, ಇದರ ಸ್ಫೋಟಕ್ಕೆ ಅಕ್ಕಪಕ್ಕದ ಬಯಲು ಪ್ರದೇಶದಲ್ಲಿದ್ದ ಮುಳಿ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಘಟನಾಸ್ಥಳಕ್ಕೆ ಪೊಲೀಸರು, ಸ್ಥಳೀಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ
