Kodagu Rain: ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿದೆ.
ಈ ಬಗ್ಗೆ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಅಪಾಯದ ಸ್ಥಳಗಳಿಗೆ ತೆರಳದಂತೆ ಹಾಗೂ ಆ ಭಾಗದ ಜನರಿಗೆ ಕಾಳಜಿ ಕೇಂದ್ರಕ್ಕೆ ತೆರಳಲು ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಅತ್ತ ಕಣಿವೆಯಲ್ಲಿ ಕಾವೇರಿ ತುಂಬಿ ಹರಿಯುತ್ತಿದ್ದು, ತೂಗು ಸೇತುವೆಯಲ್ಲಿ ಸಂಚರಿಸಲು ಕುಶಾಲನಗರ ತಹಶೀಲ್ದಾರರಿಂದ ತಾತ್ಕಾಲಿಕ ತಡೆ ನೀಡಿದ್ದಾರೆ. ಕುಶಾಲನಗರ ಸಮೀಪದ ಕಣಿವೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಯ ಕೆಳಭಾಗದಲ್ಲಿ ನೀರು ಹರಿಯುತ್ತಿದ್ದು ಇದರ ಸಮೀಪ ಇರುವ ರಾಮಲಿಂಗೇಶ್ವರ ದೇವಾಲಯದ ಮೆಟ್ಟಿಲವರೆಗೆ ಹೊಳೆ ಹರಿಯುವುದು ವಾಡಿಕೆಯಾಗಿದ್ದು, ಇದೇ ರೀತಿ ಮಳೆ ಮುಂದುವರಿದರೆ ಸಂಪೂರ್ಣ ಬರ್ತೀಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತದೆ.
ಇಂದು ಕಣಿವೆ ತೂಗು ಸೇತುವೆಯನ್ನು ತಹಶಿಲ್ದಾರರು ಪರಿಶೀಲಿಸಿದರು. ಮಳೆ ಹೆಚ್ಚಿರುವುದರಿಂದ ಸೇತುವೆಯಲ್ಲಿ ಪ್ರವಾಸಿಗರು ತೆರಳದಂತೆ ರಾಮೇಶ್ವರ ದೇವಾಲಯದ ಬಳಿ ಹೊಳೆಗೆ ಹೋಗೂವ ಗೇಟ್ ಗೆ ಬೀಗ ಅಳವಡಿಸಲಾಗಿದೆ ಎಂದು ತಹಶಿಲ್ದಾರರಾದ ಕಿರಣ್ ಗೌರಯ್ಯ ಅವರು ತಿಳಿಸಿದ್ದಾರೆ.
ಇತ್ತ ಚೇರಂಬಾಣೆ ದೋಣಿ ಕಾಡುವಿನಲ್ಲಿ ಪ್ರವಾಹ ಸ್ಥಳೀಯರಿಗೆ ಸಂಚರಿಸಲು ದೋಣಿ ವ್ಯವಸ್ಥೆ ಮಾಡಲಾಗಿದೆ. ಭಾಗಮಂಡಲ ಹೋಬಳಿ ಚೇರಂಬಾಣೆ ಗ್ರಾಮ ಪಂಚಾಯತಿಯ ಬೆಂಗೂರು ಗ್ರಾಮದ ದೋಣಿ ಕಾಡು ಎಂಬಲ್ಲಿ ಪ್ರವಾಹ ಬಂದಿದ್ದು ಸ್ಥಳೀಯರು ದೋಣಿ ಮುಖಾಂತರ ಸಂಚಾರ ಮಾಡುತ್ತಿದ್ದಾರೆ. ಪ್ರವಾಹ ಬಂದಿರುವ ದೋಣಿ ಕಾಡು ಪ್ರದೇಶಕ್ಕೆ ತಹಶೀಲ್ದಾರರು ಮಡಿಕೇರಿ ತಾಲ್ಲೂಕು ಇವರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಿದರು. ಸ್ಥಳದಲ್ಲಿ ಭಾಗಮಂಡಲ ಹೋಬಳಿ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.
