Hindu mahasabha: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಹಲವು ವಿಘ್ನಗಳು ಎದುರಾಗುತ್ತಿವೆ. ಅದರಲ್ಲೂ ಅಪೂರ್ಣವಾಗಿರುವ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠೆ ಮಾಡುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ಈ ವಿಚಾರವಾಗಿ ಹಿಂದೂ ಮಹಾಸಭಾ(Hindu mahasabha) ಕೂಡ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದು ಅಚ್ಚರಿ ಮೂಡಿಸಿದೆ.
ಹೌದು, ಮಂದಿರ ಉದ್ಘಾಟನೆಯ ಕೊನೆತ ಹಂತದಲ್ಲಿ ರಾಜ್ಯ ಹಿಂದೂ ಮಹಾಸಭಾ ನಡೆಯು ಹಲವರಿಗೆ ಅಚ್ಚರಿ ಎನಿಸಿದೆ. ಕಾರಣ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವನ್ನು ಅಪೂರ್ಣಾವಸ್ಥೆಯಲ್ಲಿರುವಾಗ ಉದ್ಘಾಟನೆ ಮಾಡುತ್ತಿರುವುದು ಧರ್ಮಶಾಸ್ತ್ರಕ್ಕೆ ಮಾಡಿದ ಅಪಚಾರವಾಗಿದೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಜೇಶ್ ಪವಿತ್ರನ್ ಅವರು, ‘ಪ್ರಭು ಶ್ರೀರಾಮಚಂದ್ರನನ್ನು ಚುನಾವಣಾ ಸರಕನ್ನಾಗಿ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶ್ರೀರಾಮನ ಶಾಪ ತಟ್ಟುತ್ತದೆ. ರಾಜ್ಯದ ಸ್ಥಿತಿ ಕೇಂದ್ರಕ್ಕೂ ಬರಬಹುದು. ರಾಮ ಜನ್ಮಭೂಮಿಯ ಮೂಲ ವಕಾಲತ್ತುದಾರರು ಹಿಂದೂ ಮಹಾಸಭಾ ಆಗಿದ್ದು, ರಾಮಮಂದಿರ ಉದ್ಘಾಟನೆಗೆ ಹಿಂದೂ ಮಹಾಸಭಾ ಹಾಗೂ ನಿರ್ಮೂಯಿ ಅಖಾಡವನ್ನು ಆಹ್ವಾನಿಸಿಲ್ಲ. ಕೇಂದ್ರದ ಈ ನಡೆ ಸರಿಯಾದುದಲ್ಲ. ಮುಂದೆ ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದರು.
