Home News ಉಜಿರೆಯಲ್ಲಿ ಹಿಂದೂ ಸಂಗಮ-ಜಾತಿ, ಧರ್ಮ ಮರೆತು ರಾಷ್ಟ್ರದ ಪುನರುತ್ಥಾನಕ್ಕೆ ಕಟಿಬದ್ಧರಾಗೋಣ: ಶರತ್‌ ಕೃಷ್ಣ ಪಡುವೆಟ್ನಾಯ

ಉಜಿರೆಯಲ್ಲಿ ಹಿಂದೂ ಸಂಗಮ-ಜಾತಿ, ಧರ್ಮ ಮರೆತು ರಾಷ್ಟ್ರದ ಪುನರುತ್ಥಾನಕ್ಕೆ ಕಟಿಬದ್ಧರಾಗೋಣ: ಶರತ್‌ ಕೃಷ್ಣ ಪಡುವೆಟ್ನಾಯ

Hindu neighbor gifts plot of land

Hindu neighbour gifts land to Muslim journalist

ಉಜಿರೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರದ ಎಲ್ಲೆಡೆ ಹಿಂದೂ ಸಂಗಮ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ನಿರಂತರ ಹೋರಾಟದಿಂದ ಹಿಂದೂ ವಿಚಾರ ಧಾರೆ, ಜನಜೀವನದಿಂದ ಧರ್ಮ ಇನ್ನೂ ಜೀವಂತವಿದೆ. ಅನೇಕರ ಹೋರಾಟದ ಫಲವಾಗಿ ಪರಕೀಯರ ಆಡಳಿತೆಗೆ ಎದೆಯೊಡ್ಡಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಪಾಶ್ಚಾತ್ಯ ಸಂಸ್ಕೃತಿಯ ಕೀಳರಿಮೆ, ಹೊಸ ಶಿಕ್ಷಣ ನೀತಿಯಿಂದ ಹಿಂದೂ ಸಮಾಜ ನಶಿಸಿಹೋಗದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಗ್ಗಟ್ಟಿನಿಂದ ಧರ್ಮ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿದೆ.

ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಕಡೆಗಣಿಸಲಾಗುತ್ತಿದೆ. ಮಕ್ಕಳಿಗೆ ಆಚಾರ, ವಿಚಾರ, ಸಂಸ್ಕಾರ, ನಮ್ಮತನವನ್ನು ಕಲಿಸುವ ಮೂಲಕ ಸಮಾಜವನ್ನು ಗಟ್ಟಿಗೊಳಿಸಲು ಹಿಂದೂ ಸಂಗಮ ಆಯೋಜಿಸಲಾಗಿದೆ.

ಪ್ರತಿಯೊಬ್ಬರೂ ಜಾತಿ, ಮತ, ಧರ್ಮ ಮರೆತು ರಾಷ್ಟ್ರದ ಪುನರುತ್ಥಾನಕ್ಕೆ ಕಟಿಬದ್ಧರಾಗೋಣ ಎಂದು ಹಿಂದೂ ಸಂಗಮ ತಾಲೂಕು ಆಯೋಜನಾ ಸಮಿತಿ ಗೌರವಾಧ್ಯಕ್ಷ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.

ಅವರು ಜ. 25ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಕೆಳಗಿನ ಮೈದಾನದಲ್ಲಿ ಹಿಂದೂ ಸಂಗಮ ತಾಲೂಕು ಆಯೋಜನಾ ಸಮಿತಿಯಿಂದ ನಡೆದ ಉಜಿರೆ, ಬೆಳಾಲು ಗ್ರಾಮದ ಉಜಿರೆ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರದ್ದಾ ಕೇಂದ್ರಗಳು ಹಿಂದೂ ಧರ್ಮ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ನಾವೆಲ್ಲ ಒಂದು ಎಂಬ ಭಾವದಿಂದ ಸಮಾಜವನ್ನು ಸಂಘಟಿಸಿ,ಮುನ್ನಡೆಸುವ ಹೊಣೆಗಾರಿಕೆ ಯುವ ಜನಾಂಗದ ಮೇಲಿದೆ ಎಂದರು.

ದಿಕ್ಕೂಚಿ ಭಾಷಣ ಗೈದ ಸಂಘದ ವಕ್ತಾರ ಕಿಶೋರ್ ಶಿರಾಡಿ ಮಾತನಾಡಿ ಧರ್ಮ ಇಂದು ಯಾವುದೇ ಒಂದು ಮತ, ಪೂಜಾ ಪದ್ಧತಿಗೆ ಸೀಮಿತವಾಗಿಲ್ಲ. ಜಾತಿ ಪದ್ಧತಿಯಿಂದ ಇಂದು ಧರ್ಮ ಉಳಿದಿದೆ.

 

ವಿವಿಧತೆಯಲ್ಲಿ ಏಕತೆ ಕಂಡಾಗ ಗೌರವ, ಶ್ರದ್ಧೆ ಮೂಡುವುದು. ಸನಾತನ ಹಿಂದೂ ಸಮಾಜ ಕೃಷಿ ಸಂಸ್ಕೃತಿಯ ಕುಟುಂಬ ಪದ್ಧತಿಯಲ್ಲಿ ವಿವಿಧತೆಯಲ್ಲಿ ಏಕತೆ ಕಂಡು ಜೀವನ ಮೈಗೂಡಿಸಿಕೊಂಡಿದೆ. ಧರ್ಮ, ಸಂಸ್ಕೃತಿಯ ನಾಶವನ್ನು ಮೆಟ್ಟಿ ನಿಲ್ಲಲು ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ನಮ್ಮ ಸಂಸ್ಕೃತಿ ಹದಗೆಟ್ಟಿದೆ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಭದ್ರತೆಯಿರಿಸಿಕೊಳ್ಳಬೇಕು ಎಂದು ನುಡಿದರು.

ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ಗಾಂಜಾ, ಡ್ರಗ್ಸ್ ಮಾಫಿಯಾ ಬೆಳೆಯುತ್ತಿದೆ. ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣವಾಗಲು ಒಗ್ಗಟ್ಟಿನ ಕೊರತೆ ಹಾಗೂ ಅಧಿಕಾರ ದಾಹ ದಿಂದ ನಮ್ಮತನ ಕಳೆದುಕೊಂಡೆವು. ಕೂಡುಕುಟುಂಬ ಮರೆಯಾಗಿ ಲಿವಿಂಗ್ ಟುಗೆದರ್ ಹೆಚ್ಚಲು ನಮ್ಮ ಸಂಸ್ಕೃತಿಯ ವಿಕೃತಿಯೇ ಕಾರಣವಾಗುತ್ತಿದೆ. ನಮ್ಮಲ್ಲಿರುವ ತಪ್ಪು, ಲೋಪದೇಶಗಳನ್ನು ಸರಿಪಡಿಸಿ ನಾವೆಲ್ಲ ಹಿಂದೂ ಒಂದು ಎಂಬ ಉದ್ದೇಶದಿಂದ ಹಿಂದೂ ಸಂಗಮ ಆಯೋಜಿಸಲಾಗಿದೆ.ಸಂಘಟಿತ ಸಮಾಜದ ನಿರ್ಮಾಣವೇ ಸಂಘದ ಉದ್ದೇಶ.ನಮ್ಮದೇ ನೆಲದಲ್ಲಿ ಹಿಂದೂಗಳ ಹತ್ಯೆ,ಅತ್ಯಾಚಾರಗಳಾಗುತ್ತಿವೆ. ವ್ಯಕ್ತಿಯಲ್ಲಿ ಸಂಸ್ಕೃತಿಯ ನಿರ್ಮಾಣಕ್ಕೆ ಆರ್ಥಿಕ ಭದ್ರತೆ ಹಾಗೂ ಆರ್ಥಿಕ ಸ್ವಾವಲಂಬಿಯಾಗಬೇಕು. ದೇಶದ ಭದ್ರತೆ, ರಕ್ಷಣೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗೆ ಸೇರಿಕೊಳ್ಳಬೇಕು ಎಂದು ನುಡಿದರು. ಅಭಿಷೇಕ್ ಶೆಟ್ಟಿ ಬಡೆಕೊಟ್ಟು, ವಸಂತ ಶರ್ಮ, ಭಾಗೇಶ್ ಕನ್ಯಾಡಿ, ಅನಂತೇಶ್ವರ ಭಜನಾ ಮಂಡಳಿ ಅನಂತೋಡಿ ಅವರನ್ನು ಸಮಿತಿಯಿಂದ ಗೌರವಿಸಲಾಯಿತು.

ವೇದಿಕೆಯಲ್ಲಿ ವಿವಿಧ ಶ್ರದ್ಧಾಕೇಂದ್ರಗಳ ಪ್ರತಿನಿಧಿಗಳಾದ ಉಜಿರೆ ಶ್ರೀ ರಾಮ ಮಂದಿರದ ನರಸಿಂಹ ನಾಯಕ್, ಓಡಲ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನದ ಸೀತಾರಾಮ ಶೆಟ್ಟಿ ಕೇಂಬರ್ಜೆ,ಪೆರ್ಲ ಅಜ್ಜ ಸನ್ಯಾಸಿ ಕಟ್ಟೆಯ ಲಕ್ಷ್ಮಣ ಸಫಲ್ಯ, ಅತ್ತಾಜೆ ಕೊರಗಜ್ಜ ಕ್ಷೇತ್ರದ ಭರತ್ ಕುಮಾರ್, ಭರತ್ ಪೂಜಾರಿ, ಪಾರ ಕಲ್ಕೂಡ ಕಲ್ಲುರ್ಟಿ ದೈವಸ್ಥಾನದ ವಿಶ್ವನಾಥ ಶೆಟ್ಟಿ, ಮಲೆಬೆಟ್ಟು ಶ್ರೀ ಮಹಾಗಣಪತಿ ಮತ್ತು ಸುಬ್ರಹ್ಮಣ್ಯ ದೇವಸ್ಥಾನದ ವೆಂಕಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ವಿವಿಧ ಭಜನಾ ಮಂಡಳಿಯ ಕುಣಿತ ಭಜನೆ ವೇಷ ಭೂಷಣದೊಂದಿಗೆ ಮೆರವಣಿಗೆ ನಡೆದು ವೇದಿಕೆಯಲ್ಲಿ ಭರತ ನಾಟ್ಯ ಧಾರ್ಮಿಕ ಆಚರಣೆಯ ಮಾಚಾರು ಮರಾಠಿ ಸಮಾಜದವರಿಂದ ಗುಮ್ಮಟ ನೃತ್ಯ, ಗೋಪೂಜೆ, ಬೆಳಾಲು ಮಾಯ ಕರಿಯಪ್ಪ ತಂಡದಿಂದ ಕರಂಗೋಲು ಕುಣಿತ, ಪದ್ಮಾವತಿ ಬೆಳಾಲು ಇವರಿಂದ ಪಾಡ್ಡನ, ಓಡಲ ಸಂಸ್ಕಾರ ಶಿಬಿರದ ಮಕ್ಕಳಿಂದ ನೃತ್ಯ ನಡೆಯಿತು.

ಕಾರ್ಯಕ್ರಮದಲ್ಲಿ ವಿ.ಪ.ಶಾಸಕ ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿಕುಮಾ‌ರ್ ಬರಮೇಲು, ಸಂಜೀವ ಶೆಟ್ಟಿ ಕುಂಟಿನಿ, ಪ್ರಶಾಂತ್, ಪಾಂಡುರಂಗ ಬಾಳಿಗಾ, ಪದ್ಮನಾಭಶೆಟ್ಟಿಗಾ‌ರ್ ಮೊದಲಾದವರು ಉಪಸ್ಥಿತರಿದ್ದರು. ಆಯೋಜನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು ಸ್ವಾಗತಿಸಿ, ಅನುಷಾ ಇಜ್ಜಲ ಪ್ರಸ್ತಾವಿಸಿದರು. ಶಿವಪ್ರಸಾದ್ ಸುರ್ಯ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ಬೆಳಾಲು ವಂದಿಸಿದರು.