ಮಂಗಳೂರು: ಮನೆಯಲ್ಲಿ ಕೌಟುಂಬಿಕ ಕಲಹಕ್ಕೆ ಪರಿಹಾರವಾಗಿ ಪೂಜೆ ಮಾಡಿಸಬೇಕೆಂದು ಪುರೋಹಿತರೋರ್ವರನ್ನು ಮನೆಗೆ ಕರೆಸಿ, ಹನಿಟ್ರ್ಯಾಪ್ ಮಾಡಿ ಸುಲಿಗೆ ನಡೆಸಿದ ಪ್ರಕರಣವು ನಗರದ ಹೊರವಲಯದ ಪದವಿನಂಗಡಿ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಾದ ದಂಪತಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಭವ್ಯ ಹಾಗೂ ರಾಜು ಎಂದು ಗುರುತಿಸಲಾಗಿದ್ದು, ಈ ದಂಪತಿಗಳು ಚಿಕ್ಕಮಗಳೂರು ಮೂಲದ ಪುರೋಹಿತ ಜ್ಯೋತಿಷ್ಯರೊಬ್ಬರನ್ನು ಸಮಸ್ಯೆ ಪರಿಹರಿಸಲೆಂದು ಮನೆಗೆ ಕರೆಸಿ, ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಹನಿಟ್ರ್ಯಾಪ್ ನಡೆಸಿದಲ್ಲದೆ ಸುಲಿಗೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಅದಲ್ಲದೇ ಮನೆಯಲ್ಲಿ ಪುರೋಹಿತರೊಂದಿಗಿದ್ದ ಫೋಟೋ, ವೀಡಿಯೋ ವನ್ನು ಇಟ್ಟುಕೊಂಡು ಜ್ಯೋತಿಷ್ಯರಿಂದ ಸುಮಾರು 35 ರಿಂದ 45 ಲಕ್ಷ ಹಣವನ್ನು ಎಗರಿಸಿ ಕೊಲೆ ಬೆದರಿಕೆಯನ್ನು ಹಾಕಿದ್ದರು. ಆ ಹಣದಲ್ಲಿ ತಾವಿದ್ದ ಬಾಡಿಗೆ ಮನೆಯನ್ನು ಬಿಟ್ಟು ಫ್ಲಾಟ್ ಒಂದನ್ನು ಲೀಸ್ ಗೆ ಪಡೆದುಕೊಂಡು ಒಂದು ದ್ವಿಚಕ್ರ ವಾಹನ ಸಹಿತ ಸುಮಾರು ಲಕ್ಷ ಮೌಲ್ಯದ ಸೊತ್ತನ್ನು ಮನೆ ತುಂಬಿಸಿಕೊಂಡಿದ್ದರು.
ಸದ್ಯ ಇವರಿಬ್ಬರ ಐಷಾರಾಮಿ ಜೀವನ ಹೆಚ್ಚು ದಿನ ಉಳಿಯಲಿಲ್ಲ. ಜ್ಯೋತಿಷಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳಾದ ದಂಪತಿಗಳನ್ನು ಬಂಧಿಸಿದ್ದಾರೆ.
