PWD Department: ಜಿಲ್ಲೆಯ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿ ಕಟ್ಟಡಗಳ ನಿರ್ಮಾಣವಾಗಿದ್ದು, ರಸ್ತೆ ಅಗಲೀಕರಣದ ವೇಳೆ ಇವುಗಳನ್ನು ಕೆಡವಿ ಹಾಕಲಾಗುತ್ತದೆ. ಹೀಗಾಗಿ ರಸ್ತೆಯ ಸಮೀಪ ಕಟ್ಟಡ ನಿರ್ಮಾಣ ಮಾಡಿ ರಸ್ತೆ ಅಗಲೀಕರಣದ ಸಮಯದಲ್ಲಿ ಅದನ್ನು ಕೆಡವಿ ಹಾಕುವುದನ್ನು ತಪ್ಪಿಸಲು ಕಟ್ಟಡ ಎಷ್ಟು ದೂರದಲ್ಲಿರಬೇಕು ಎಂದು ಕರ್ನಾಟಕ ಲೋಕೋಪಯೋಗಿ ಇಲಾಖೆ ಆದೇಶದ ಮೂಲಕ ಮಾಹಿತಿ ನೀಡಲಾಗಿದೆ.
ಹೌದು, ಜಿಲ್ಲಾ ಮುಖ್ಯ ರಸ್ತೆ ಅಕ್ಕ ಪಕ್ಕದಲ್ಲಿ ಕಟ್ಟಡಗಳು ಎಷ್ಟು ದೂರದಲ್ಲಿರಬೇಕು?. ಈ ಕುರಿತು ಕರ್ನಾಟಕದ ಲೋಕೋಪಯೋಗಿ ಇಲಾಖೆ ಪರಿಷ್ಕೃತ ಆದೇಶವನ್ನು ಜಾರಿಗೊಳಿಸಿದೆ.
ಏನಿದೆ ಆದೇಶದಲ್ಲಿ?
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ದಿನಾಂಕ 18.10.2004ರಲ್ಲಿ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ದಾಖಲಿತ ರಸ್ತೆಯ ಭೂಗಡಿಯ ಅಂಚಿನಿಂದ ನಿಗದಿಗೊಳಿಸಲಾಗಿದ್ದ ಕಟ್ಟಡ ರೇಖೆಯು ರಾಜ್ಯ ಹೆದ್ದಾರಿಯ ಜೊತೆಗೆ ಜಿಲ್ಲಾ ಮುಖ್ಯ ರಸ್ತೆಗಳಿಗೂ ಈ ಕೆಳಕಂಡಂತೆ ಅನ್ವಯಿಸುತ್ತದೆ.
ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಟೌನ್ ಪಂಚಾಯತಿ, ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮಠಾಣಾ ಪರಿಮಿತಿಯಲ್ಲಿ 6 ಮೀಟರ್. ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ 15 ಕಿ. ಮೀ. ದೂರದವರೆಗೆ 12 ಮೀಟರ್.
ಈ ಪರಿಮಿತಿಗಳನ್ನು ನಿಗದಿಪಡಿಸಿ ನೀಡುವುದು ಆಯಾ ಸ್ಥಳೀಯ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ ಹಾಗೂ ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಸೆಕ್ಷನ್ 4ರ ಪ್ರಕಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಣೆ ಮಾಡಲಾಗಿದ್ದು, ದಾಖಲಿತ ರಸ್ತೆಯ ಭೂಗಡಿಯ ಅಂಚನ್ನು ಗುರುತಿಸುವುದು ಆಯಾ ಕಾರ್ಯಪಾಲಕ ಇಂಜಿನಿಯರ್‌ಗಳ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶ ತಿಳಿಸಿದೆ.
