Hubballi: ಮನೆ ಕಟ್ಟುತ್ತೇವೆ ಎಂಬುದಾಗಿ ಹೇಳಿಕೊಂಡು ಮಸೀದಿಯನ್ನು ನಿರ್ಮಿಸಿರುವಂತಹ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಬೆನ್ನಲ್ಲೇ ಈ ವಿಚಾರವನ್ನು ಮುಂದಿಟ್ಟುಕೊಂಡು ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿದ್ದಾವೆ.
ಹೌದು, ನಗರದ ನೇಕಾರ ನಗರದ ಶಿವನಾಗರ ಬಡಾವಣೆಯಲ್ಲಿ ಕುಟುಂಬವೊಂದು ಮನೆ ನಿರ್ಮಾಣಕ್ಕೆ ಪಾಲಿಕೆಯಿಂದ ಪರವಾನಗಿ ಪಡೆದು ಮನೆ ನಿರ್ಮಾಣ ಮಾಡಿತ್ತು. ಇಲ್ಲಿ ಹಿಂದೂ ಧರ್ಮದವರು ಹೆಚ್ಚಿದ್ದರೂ ಮುಸ್ಲಿಂ ಸಮುದಾಯ ಮನೆ ಕಟ್ಟಿದ್ದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಮನೆ ಕಟ್ಟಿದವರು ವಾಸಿಸುವ ಬದಲು, ಅದನ್ನು ಮಸೀದಿಯಾಗಿ (Mosque) ಬದಲಾವಣೆ ಮಾಡಲಾಗಿದೆ. ಮನೆ ಮುಂದೆಯೇ ಮಸೀದಿ ನಿರ್ಮಾಣ ಮಾಡಿ, ಪ್ರತಿನಿತ್ಯ ನೂರಾರು ಜನರು ನಮಾಜ್ ಮಾಡಲು ಆರಂಭಿಸಿದ್ದರು. ಇದನ್ನು ದಿನವೂ ಗಮನಿಸುತ್ತಿದ್ದ ಹಿಂದೂ ಸಂಘಟನೆಗಳು, ಇದೀಗ ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯ ತೆರವಿಗೆ ಆಗ್ರಹಿಸಿದ್ದಾರೆ.
ಕಳೆದ ಐದಾರು ತಿಂಗಳಿಂದ ಸ್ಥಳೀಯರು ಮತ್ತು ಮಸೀದಿ ನಿರ್ಮಾಣ ಮಾಡಿದ್ದ ಸಾರವಾಡ್ ಕುಟುಂಬದವರ ನಡುವೆ ವಾಗ್ವಾದಗಳು ಮೇಲಿಂದ ಮೇಲೆ ನಡೆಯುತ್ತಲೇ ಇದ್ದವು. ಈ ಪ್ರಕರಣ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಮಟ್ಟಿಲೇರಿತ್ತು. ಪೊಲೀಸರು ಕೂಡ ಎರಡು ಕಡೆಯವರನ್ನು ಕರೆಸಿ, ಶಾಂತಿ ಸುವ್ಯವಸ್ಥೆ ಹಾಳು ಮಾಡದಂತೆ ಎಚ್ಚರಿಕೆ ನೀಡಿದ್ದರು. ಆದರೆ ಅನ್ಯ ಧರ್ಮೀಯರು, ನಮಾಜ್ ಮಾಡುವುದು ಮುಂದುವರಿಸಿದ್ದರಿಂದ ಹಿಂದೂ ಧರ್ಮೀಯರು ಹೋರಾಟಕ್ಕೆ ಕರೆ ಕೊಟ್ಟಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ನೇಕಾರ ನಗರ ಸೇರಿದಂತೆ ಮಸೀದಿ ನಿರ್ಮಾಣ ಮಾಡಿದ್ದ ಸ್ಥಳದ ಸುತ್ತಮುತ್ತ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆಮ ಮಾಡಲಾಗಿತ್ತು. ಬ್ಯಾರಿಕೇಡ್ಗಳನ್ನು ಹಾಕಿ ಮಸೀದಿ ನಿರ್ಮಾಣ ಮಾಡಿದ್ದ ಸ್ಥಳಕ್ಕೆ ಬೇರೆಯವರು ಹೋಗದಂತೆ ನಿಷೇಧ ಹೇರಲಾಗಿತ್ತು. ಇನ್ನು ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭಾಗಿಯಾಗಿದ್ದರು.
