Home » ಗಂಡ ಹಾಗೂ ಅತ್ತೆ ಮನೆಯವರನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿನ್ನಾಭರಣಗಳೊಂದಿಗೆ ಓಡಿಹೋದ ವಧು !! | ಮದುವೆಯಾದ ಹತ್ತೇ ಗಂಟೆಗಳಲ್ಲಿ ಮದುಮಗಳ ಗ್ರೇಟ್ ಎಸ್ಕೇಪ್

ಗಂಡ ಹಾಗೂ ಅತ್ತೆ ಮನೆಯವರನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿನ್ನಾಭರಣಗಳೊಂದಿಗೆ ಓಡಿಹೋದ ವಧು !! | ಮದುವೆಯಾದ ಹತ್ತೇ ಗಂಟೆಗಳಲ್ಲಿ ಮದುಮಗಳ ಗ್ರೇಟ್ ಎಸ್ಕೇಪ್

0 comments

ಕೆಲವೊಂದು ಮದುವೆ ಮನೆಗಳಲ್ಲಿ ಅವಾಂತರಗಳು ನಡೆಯುತ್ತಲೇ ಇರುತ್ತವೆ. ಮದುವೆಗೆ ಇನ್ನೇನು ಕೆಲವೇ ಕ್ಷಣ ಇದೆ ಎನ್ನುವಷ್ಟರಲ್ಲಿ ವರ ಅಥವಾ ವಧು ಮನೆಬಿಟ್ಟು ಓಡಿ ಹೋಗುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿದೆ. ಆದರೆ ಇಲ್ಲೊಂದು ಕಡೆ ಮದುವೆಯ ಬಳಿಕ ವರ ಮತ್ತು ಅತ್ತೆ ಮನೆಯವರನ್ನು ಮನೆಯೊಳಗೆ ಕೂಡಿ ಹಾಕಿ ಚಿನ್ನಾಭರಣ ದೋಚಿಕೊಂಡು ವಧು ರಾತ್ರೋರಾತ್ರಿ ಎಸ್ಕೇಪ್ ಆಗಿರುವ ಘಟನೆ ಆಗ್ರಾದಲ್ಲಿ ನಡೆದಿದೆ.

ಏಪ್ರಿಲ್ 25ರಂದು ಆಗ್ರಾದ ಶಾಹಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮದುವೆಯಾಗಿ ಅತ್ತೆ ಮನೆಗೆ ಬಂದ ಕೇವಲ 10 ಗಂಟೆಗಳಲ್ಲೇ ವಧು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾಳೆ.

ಬೆಳ್ಳಿ ಕುಶಲಕರ್ಮಿಕನಾಗಿದ್ದ ಯುವಕ ವಧುವನ್ನು ಹುಡುಕುತ್ತಿದ್ದರು. ಇದೇ ವೇಳೆ ತಾಜ್‍ಗಂಜ್‍ನ ಕಾರ್ಖಾನೆಯ ಉದ್ಯೋಗಿಯೊಬ್ಬರು ತಮ್ಮ ಅತ್ತಿಗೆಗೆ ಎರಡು ತಿಂಗಳಿನಿಂದ ವರನನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದರು. ನಂತರ ಎರಡು ಕಡೆಯವರು ಭೇಟಿಯಾಗಿ ಮದುವೆಗೆ ಒಪ್ಪಿದರು.

ವಧುವಿನ ಸೋದರ ಮಾವ, ಹುಡುಗಿ ಮನೆಯವರು ಬಡವರಾಗಿದ್ದು, ಮದುವೆಯ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ವರನ ಮನೆಯವರು ಇಬ್ಬರೂ ಕಡೆಯವರ ಮದುವೆಯ ವೆಚ್ಚದ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು. ಬಳಿಕ ಏಪ್ರಿಲ್ 25 ರಂದು ಗೋರಖ್‍ಪುರದಲ್ಲಿ ಈ ಜೋಡಿ ಸಂಪ್ರದಾಯದ ಪ್ರಕಾರ ವಿವಾಹವಾದರು. ಏಪ್ರಿಲ್ 26ರ ಬೆಳಗ್ಗೆ ವಧುವನ್ನು ವರನ ಕಡೆಯವರು ಆಗ್ರಾದಲ್ಲಿರುವ ತಮ್ಮ ಮನೆಗೆ ಕರೆದೊಯ್ದರು.

ಏಪ್ರಿಲ್ 26ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ವಧು ಮನೆಯ ಕಂಪೌಂಡ್ ಹತ್ತಿ ಪರಾರಿಯಾಗಿದ್ದಾಳೆ. ವಧು ಪರಾರಿಯಾಗುವ ಮುನ್ನ ತನ್ನ ಅತ್ತೆ ಮತ್ತು ಗಂಡನ ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ ಓಡಿಹೋಗಿದ್ದಾಳೆ. ಈ ವಿಚಾರ ತಿಳಿದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ತಡರಾತ್ರಿ ವಧು ಹೊರಗೆ ಹೋಗುತ್ತಿರುವುದನ್ನು ಕಂಡ ಕಾಲೋನಿ ವಾಚ್‍ಮನ್ ಅನುಮಾನಗೊಂಡು ಗೇಟ್ ತೆರೆಯಲು ನಿರಾಕರಿಸಿದ್ದಾನೆ ಮತ್ತು ವಧುವನ್ನು ಪ್ರಶ್ನಿಸಲು ಮುಂದಾಗಿದ್ದಾನೆ. ಆಗ ವಾಚ್‍ಮನ್‍ಗೆ ವಧು ಬೆದರಿಕೆಯೊಡ್ಡಿ ಓಡಿ ಹೋಗಿದ್ದಾಳೆ.

ಕೊನೆಗೆ ಬಾಗಿಲು ಒಡೆದು ಹಾಕಿ ಗಂಡ ಮತ್ತು ಆತನ ಕುಟುಂಬಸ್ಥರು ಮನೆಯಿಂದ ಹೊರಬಂದು ರಾತ್ರಿಯಿಡೀ ವಧುವನ್ನು ಹುಡುಕಾಡಿದ್ದಾರೆ. ಆದರೆ ವಧು ಪತ್ತೆಯಾಗಲಿಲ್ಲ. ಇದರಿಂದ ಬೇಸರಗೊಂಡ ಕುಟುಂಬಸ್ಥರು ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕಾಲೋನಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

You may also like

Leave a Comment