C M Siddaramiah : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಒಮ್ಮೆ ತಣ್ಣಗಾದರೆ ಮತ್ತೊಮ್ಮೆ ಜೋರಾಗಿ ಅದು ಸದ್ದು ಮಾಡುತ್ತದೆ. ಅಂತೆಯೇ ಕೆಲ ದಿನಗಳಿಂದ ಈ ವಿಚಾರ ಮತ್ತು ಚರ್ಚೆಯಲ್ಲಿತ್ತು. ಇದೀಗ ಈ ಕುರಿತಾಗಿ ಸಿದ್ದರಾಮಯ್ಯ(CM Siddaramiah) ಹೊಸ ಬಾಂಬ್ ಸಿಡಿಸಿದ್ದು ‘ಈ ಅವಧಿಗೆ ಮಾತ್ರವಲ್ಲ, ಮುಂದಿನ ಅವಧಿಗೂ ನಾನೇ ಸಿಎಂ’ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹೌದು, ಪ್ರಸಕ್ತ ಅವಧಿಯ ಐದು ವರ್ಷವೂ ನಾನೇ ಮುಖ್ಯಮಂತ್ರಿ. ಮುಂದಿನ ಅವಧಿಯ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗಲೂ ನಾನೇ ಮುಖ್ಯಮಂತ್ರಿ ಆಗಿ ಇರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸದ್ಯ ರಾಜ್ಯದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ಚರ್ಚೆಯಾಗುವಂತಹ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಐದೂ ವರ್ಷ ಪೂರೈಸಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ‘ಹೌದು ಈ ಐದು ವರ್ಷ ಅಲ್ರೀ, ಮತ್ತೆ ಮುಂದಿನ ಐದು ವರ್ಷವೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಹೇಳಿದರು. ಆಗಲೂ ನೀವೇ ಮುಖ್ಯಮಂತ್ರಿ ಆಗಿರುತ್ತೀರಾ ಎಂಬ ಬಿಜೆಪಿ ಸದಸ್ಯರ ಪ್ರಶ್ನೆಗೆ, ‘ಹೌದು ನಾನೇ ಇರುತ್ತೇನೆ’ ಎಂದು ಸ್ಪಷ್ಟವಾಗಿ ಹೇಳಿದರು.
