Ramya: ಅಶ್ಲೀಲ ಕಮೆಂಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಕಮಿಷನರ್ ಗೆ ರಮ್ಯಾ ದೂರು ನೀಡಿದ್ದಾರೆ.
ಹೌದು, ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟಿ ರಮ್ಯಾ ಅವರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಸೋಮವಾರ ಲಿಖಿತ ದೂರು ನೀಡಿದ್ದಾರೆ.
ಇನ್ನು ದೂರು ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಮ್ಯಾ ಅವರು, ನಾನು ರೇಣುಕಾಸ್ವಾಮಿ ಕೇಸ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆಶಾಕಿರಣವಾಗಲಿದೆ ಎಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದೆ. ಅದರ ನಂತರ ನನಗೆ ಸಾಲು ಸಾಲು ಕೆಟ್ಟ ಕೆಟ್ಟ ಮೆಸೇಜ್‌ಗಳು ಬಂದಿದೆ. ರೇಣುಕಾಸ್ವಾಮಿ ಮಾಡಿದ್ದ ಮೆಸೇಜ್‌ಗೂ ನನಗೆ ಬರುತ್ತಿರೋ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಒಬ್ಬ ನಟಿ ನನಗೆ ಟ್ರೋಲ್ ಅಭ್ಯಾಸ ಇದೆ. ಆದರೂ ಈ ರೀತಿ ಕೀಳು ಮಟ್ಟಕ್ಕೆ ನನಗೆ ಯಾವತ್ತೂ ಮೆಸೇಜ್ ಬಂದಿರಲಿಲ್ಲ. ನನಗೆ ಈ ರೀತಿ ಮಾಡುತ್ತಿದ್ದಾರೆ, ಇನ್ನೂ ಸಾಮಾನ್ಯ ಮಹಿಳೆಯರಿಗೆ ಯಾವ ರೀತಿ ಮಾಡಿರಬಹುದು. ಸಮಾಜ ಎಷ್ಟು ಕೀಳು ಮಟ್ಟಕ್ಕೆ ಇಳಿತಿದೆ ಅಂತ ನನಗೆ ಬೇಸರ ಆಗಿದೆ. ಹಾಗಾಗಿ ಎಲ್ಲಾ ಮಹಿಳೆಯರ ಪರವಾಗಿ ನಾನು ದೂರು ನೀಡಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.
ಅಲ್ಲದೆ ನನ್ನ ಜೀವನದಲ್ಲಿ ಇದೊಂದು ಕೆಟ್ಟ ಅನುಭವ. ನನಗೆ ಸಿನಿಮಾ ರಂಗದಿಂದ ಸಹ ಅನೇಕ ಜನ ಮೆಸೇಜ್ ಮಾಡಿ ಬೆಂಬಲ ನೀಡಿದ್ದಾರೆ. ಅವರಿಗೆಲ್ಲಾ ಎದುರಿಗೆ ಬಂದು ಮಾತನಾಡಲು ಭಯ. ನಾನು ಈ ಹಿಂದೆ ಸಹ ಯಶ್ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡಿದ ಸಹ ಅದರ ವಿರುದ್ಧ ಧ್ವನಿ ಎತ್ತಿದ್ದೆ. ನಾನು ಸಿನಿಮಾ ರಂಗದಲ್ಲಿ ಎಷ್ಟು ಬೇಕೋ ಅಷ್ಟು ಸ್ನೇಹ ಇಟ್ಟುಕೊಂಡಿದ್ದೀನಿ. ನನ್ನ ಬಳಿ ದರ್ಶನ್ ನಂಬರ್ ಸಹ ಇಲ್ಲ, ನಾನಷ್ಟೂ ಕ್ಲೋಸ್ ಇಲ್ಲ ಎಂದಿದ್ದಾರೆ.
