Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತ ಕರ್ನಾಟಕದ ಜನತೆಯನ್ನು ಶೋಕ ಸಾಗರದಲ್ಲಿ. ಆರ್‌ಸಿಬಿ 18 ವರ್ಷಗಳ ಬಳಿಕ ಗೆದ್ದಿತು ಎಂದು ಸಂಭ್ರಮಿಸಬೇಕು ಅಥವಾ ಆರ್‌ಸಿಬಿ ಅಭಿಮಾನಿಗಳ ದುರಂತ ಸಾವನ್ನು ಕಂಡು ದುಃಖ ಪಡಬೇಕೋ ಎಂದು ಒಂದೂ ತಿಳಿಯದಾಗಿದೆ. ಆದರೆ ಸರ್ಕಾರವು ಜಸ್ಟ್ ಈ ಒಂದು ಕೆಲಸ ಮಾಡಿದರೆ ಸಾಕಿತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವ ದುರಂತವೂ ಕೂಡ ಆಗುತ್ತಿರಲಿಲ್ಲ.
ಹೌದು, ಚಿನ್ನಸ್ವಾಮಿಯಲ್ಲಿ ಅಷ್ಟೊಂದು ಜನ ಸೇರಲು ಮತ್ತು ನೂಕು ನುಗ್ಗಲಾಗಲು ಒಂದೇ ಒಂದು ಕಾರಣ ಉಚಿತ ಆಫರ್!! ಯಸ್, ಸಾಮಾನ್ಯವಾಗಿ ಚಿನ್ನಸ್ವಾಮಿ ಮೈದಾನಕ್ಕೆ ಪಂದ್ಯಗಳನ್ನು ನೋಡಲು ಒಂದೋ ಟಿಕೆಟ್ ಸಿಗಲ್ಲ, ಸಿಕ್ಕರೆ ಬಲು ದುಬಾರಿಯಾಗಿರುತ್ತದೆ. ಆದರೆ ಈಗ ಉಚಿತವಾಗಿ ಕೊಹ್ಲಿ ಮತ್ತು ಆರ್ ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಬಹುದು ಎಂಬ ಒಂದೇ ಉದ್ದೇಶಕ್ಕೆ ಜನ ಸಾಗರದಂತೆ ಬಂದರು.
ಇನ್ನು ಸ್ಟೇಡಿಯಂ ಆಸನಗಳ ಸಾಮರ್ಥ್ಯ 35 ಸಾವಿರವಿದ್ದು, ೨-೩ ಲಕ್ಷ ಜನರು ಬಂದಿದ್ದಾರೆ. ಪಂದ್ಯ ಮುಗಿದು ಆರ್‌ಸಿಬಿ ಗೆಲುವು ಸಾಧಿಸಿದಾಗ ಕೆಎಸ್‌ಸಿಎ ವಿಜಯೋತ್ಸವ ಹಮ್ಮಿಕೊಂಡಿತು. ಆದರೆ, ಲಕ್ಷಗಟ್ಟಲೇ ಜನರು ಬರುತ್ತಾರೆ ಎಂಬುದಾಗಿ ನಿರೀಕ್ಷಿಸಿರಲಿಲ್ಲ. ಹೀಗಾಗಿ ಕೊನೆ ಕ್ಷಣದಲ್ಲಿ ಉಚಿತ ಪ್ರವೇಶ ಬದಲು ಟಿಕೆಟ್ ನೀಡಲು ನಿರ್ಧರಿಸಿತು.
ಉಚಿತ ಪ್ರವೇಶ ವಿಷಯದಲ್ಲಿ ಕೆಎಸ್‌ಸಿಎ ಗೊಂದಲಕ್ಕೊಳಗಾಗುವುದಲ್ಲದೇ, ಅಭಿಮಾನಗಳನ್ನು ಸಹ ಗೊಂದಲಕ್ಕೊಳಗಾಗುವಂತೆ ಮಾಡಿತು. ಉಚಿತ ಪ್ರವೇಶ ಎಂದು ಭಾವಿಸಿ ಬಂದಿದ್ದ ಅಭಿಮಾನಿಗಳಲ್ಲಿ ಟಿಕೆಟ್ ನೀಡಿ ಸ್ಟೇಡಿಯಂ ಒಳಗೆ ಪ್ರವೇಶಿಸಬೇಕು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜನಾಕ್ರೋಶ ವ್ಯಕ್ತವಾಯಿತು. ನೂಕುನುಗ್ಗಲು ಸಂಭವಿಸಿ ಕಾಲ್ತುಳಿತ ಉಂಟಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ವೇಳೆ ನಡೆದ ದುರಂತ ಎಲ್ಲ ಸಂಭ್ರಮವನ್ನೂ ನುಂಗಿಹಾಕಿತು.
ಒಂದು ವೇಳೆ ಟಿಕೆಟ್ ದರ ಕನಿಷ್ಠ 300 ರೂ.ಗಳನ್ನಾದರೂ ಫಿಕ್ಸ್ ಮಾಡಿದ್ದರೆ ಅರ್ಧಕ್ಕರ್ಧ ಜನ ಕಡಿಮೆಯಾಗುತ್ತಿದ್ದರು. ಈ ಹಣವನ್ನು ಸೈನಿಕರ ನಿಧಿಗೋ, ಇನ್ಯಾವುದೋ ಒಳ್ಳೆಯ ಕೆಲಸಕ್ಕೆ ಬಳಸಿಕೊಂಡಿದ್ದರೂ ಸಾಕಿತ್ತು. ಆದರೆ ಟಿಕೆಟ್ ದರವಿದೆ ಎಂದು ಗೊತ್ತಾಗಿದ್ದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಇದೊಂದು ಕೆಲಸ ಮಾಡಿದ್ದರೆ ಈ ದುರಂತವೇ ಸಂಭವಿಸುತ್ತಿರಲಿಲ್ಲವೇನೋ.
