Mysore dasara: ನಾಡದೇವತೆ ತಾಯಿ ಚಾಮುಂಡೇ ಶ್ವರಿ ದೇವಿಯ ಶಾಪ ತಟ್ಟಬಾರದು ಅಂದರೆ ಸಾಹಿತಿ ಬಾನು ಮುಸ್ತಾಕ್ ಅವರು ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಬೇಕು ಎಂದು ವಿಧಾನಸಭಾ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಉದ್ಘಾಟನೆಯಾಗುತ್ತದೆ. ಸನಾತನ ಧರ್ಮದಂತೆ ಪೂಜೆ, ಪುನಸ್ಕಾರ ನಡೆಯುವ ಆ ಸ್ಥಳದಲ್ಲಿ ಬಾನು ಮುಸ್ತಾಕ್ ಅವರಿಗೇನು ಕೆಲಸ ಎಂದು ಪ್ರಶ್ನಿಸಿದರು.
ಬಾನು ಮುಷ್ಕಾಕ್ ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡಿಲ್ಲ. ಹೀಗಿರುವಾಗ ಹಿಂದೂ ಧರ್ಮದ ಧಾರ್ಮಿಕ ವಿಧಿ ವಿಧಾನ ನಡೆಯುವ ಸ್ಥಳದಲ್ಲಿ ಅವರಿಗೇನು ಕೆಲಸ ಇರುತ್ತದೆ ಎಂದು ಮರು ಪ್ರಶ್ನಿಸಿದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲದೆ ಸನಾತನ ಹಿಂದೂ ಧಾರ್ಮಿಕ ಆಚರಣೆ ಆಧಾರಿತ ಕಾರ್ಯಕ್ರಮವಾಗಿದೆ. ದಸರಾ ಉದ್ಘಾಟಕರು ತಾಯಿ ಚಾಮುಂಡೇಶ್ವರಿ ದೇವಿ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಬೇಕು. ಕನ್ನಡ ಬಾವುಟ ಮತ್ತು ಅರಿಶಿನ, ಕುಂಕುಮದ ಬಗ್ಗೆ ಕೇವಲವಾಗಿ ಮಾತನಾಡಿರುವ ಬಾನು ಮುಷ್ಕಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಸರಿ ಇಲ್ಲ ಎಂದು ಆರೋಪಿಸಿದ್ದಾರೆ.
ತಾಯಿ ಚಾಮುಂಡೇಶ್ವರಿ ಶಾಪ ತಟ್ಟಬಾರದು ಅಂದರೆ ಬಾನು ಮಸ್ತಾಕ್ ಅವರು ದಸರಾ ಉದ್ಘಾಟನೆಯಿಂದ ಹೊರಗುಳಿಯುವುದು ಒಳಿತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆ ನೀಡಿದ್ದಾರೆ.
