Greater Bengaluru: ಗ್ರೆಟರ್ ಬೆಂಗಳೂರು ಆಡಳಿತ ವ್ಯವಸ್ಥೆ ಜಾರಿ ವಿಚಾರವಾಗಿ ಚರ್ಚೆ ಮುಂದುವರೆದಿದ್ದು, ವಿಧಾನಸೌಧದಲ್ಲಿ ಸಭೆ ಕರೆಯಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆದಿದ್ದು, ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳು, ಗೃಹ ಸಚಿವ ಡಾ.ಜಿ ಪರಮೇಶ್ವರ, ಶಾಸಕ ರಿಜ್ವಾನ್ ಹರ್ಷದ್ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್ ಗ್ರೇಟರ್ ಬೆಂಗಳೂರು ಯಾವ ರೀತಿ ವಿಂಗಡಣೆ ಆಗಬೇಕು ಅಂಥಾ ಒಂದು ಫೈನಲ್ ರಿಪೋರ್ಟ್ ಕೊಟ್ಟಿದ್ದಾರೆ ಎಂದರು.
ನಾನು ವಿಪಕ್ಷ ನಾಯಕರ ಜೊತೆ ಮಾತಾಡಬೇಕಿತ್ತು. ಅವತ್ತು ನಾನು ಇರಲಿಲ್ಲ. ನಮ್ಮ ಅಧಿಕಾರಿಗಳಿಗೆ ಹೇಳಿದ್ದೇನೆ. ವಿಪಕ್ಷ ನಾಯಕರಿಗೂ ತಿಳಿಸೋಕೆ. ಅವರನ್ನು ವಿಶ್ವಾಸಕ್ಕೆ ತಗೋಬೇಕು. ಈಗಿರುವ ವ್ಯಾಪ್ತಿಯಲ್ಲೇ ಅಳವಡಿಸ್ತೇವೆ. ಆದಷ್ಟು ಬೇಗ ಕ್ಯಾಬಿನೆಟ್ ಗೆ ಇಡ್ತೇನೆ. ಆದಷ್ಟು ಬೇಗ ಎಲೆಕ್ಷನ್ ಮಾಡಬೇಕು. ಅದಾದ ಮೇಲೆ ಮುಂದೆ ಇತರ ಸ್ಥಳಗಳನ್ನು ಸೇರಿಸಬೇಕಾಗುತ್ತದೆ. ಈಗ ಸದ್ಯ ಎಲ್ಲಾ ಸಮವಾಗಿ ಮಾಡಿದಾರೆ. ಸದ್ಯ ಏನಿದೆ ಅದೇ ರೀತಿ ಇರಲಿದೆ ಎಂದರು.
ಇದೇ ವೇಳೆ ಮಾಧ್ಯಮದವರು ಎತ್ತಿನ ಹೊಳೆ ಯೋಜನೆ ಬಗ್ಗೆ ಕೇಳಿದ್ದಕ್ಕೆ ಎತ್ತಿನಹೊಳೆ ವಿಚಾರವಾಗಿ ಅರಣ್ಯ ಸಚಿವರನ್ನ ಭೇಟಿಯಾಗ್ತೇನೆ. ಹಾಸನ, ತುಮಕೂರುಗೆ ಪರ್ಮಿಷನ್ ಆಗಬೇಕು. ಇನ್ನೂ ಪರ್ಮಿಷನ್ ಕೊಟ್ಟಿಲ್ಲ. ದೂರವಾಣಿ ಮೂಲಕವಷ್ಟೇ ಮಾತಾಡಿದ್ದೆ. ಜಲಸಂಪನ್ಮೂಲ ಸಚಿವರನ್ನ ಭೇಟಿಯಾಗಿ ಚರ್ಚಿಸ್ತೇನೆ ಎಂದರು.
ಎತ್ತಿನಹೊಳೆ ವಿಚಾರವಾಗಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅವರ ತಾಲೂಕಿನಲ್ಲಿ ಕೆಲ ಸಮಸ್ಯೆಗಳಿದ್ವು. ಯೋಜನೆಯಿಂದ ಅವರ ತಾಲೂಕು ಕೈಬಿಡಬೇಕು ಅಂತಾ ಪ್ರಸ್ತಾಪ ಇತ್ತು. ನೀರು ನಿಲ್ಲಿಸುವಾಗ ಯಾವ ಹಳ್ಳಿಗಳು ಮುಳುಗಡೆ ಆಗದಂತೆ ಅವರ ಅನುಮತಿ ಪಡೆದಿದ್ದೇವೆ. ಅವರಿಗೂ ವಿವರಿಸಿದ್ದೇವೆ. ಅಲ್ಲಿ ಕೆರೆಗಳು ಸುಮಾರು 150 ಅಡಿ ಆಳದಲ್ಲಿದೆ. ಅವರನ್ನೂ ವಿಶ್ವಾಸಕ್ಕೆ ತಗೋಬೇಕಲ್ವಾ. ನಾಳೆ ಅವರೂ ಕ್ಯಾಬಿನೆಟ್ ನಲ್ಲಿರ್ತಾರೆ. ಲ್ಯಾಂಡ್ ಅಕ್ವಿಷನ್ ಪ್ರಾರಂಭ ಮಾಡಬೇಕಿದೆ. ಹೀಗಾಗಿ ಅವರ ಜೊತೆ ಮಾತಾಡಿದೇನೆ ಎಂದರು.
ಇನ್ನು ಹೈಕಮಾಂಡ್ ನಾಯಕರ ಭೇಟಿಯಾಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಕಾಂಗ್ರೆಸ್ ಪಾರ್ಟಿ ನಮಗೆ ದೇವಸ್ಥಾನ ಇದ್ದಂಗೆ. ಹೋದಾಗ ಕೈಮುಗಿದು ಬರ್ತಿರ್ತೇವೆ ಎಂದರು. ರಂಭಾಪುರ ಶ್ರೀಗಳು ಡಿಕೆ ಶಿವಕುಮಾರ್ ಗೆ ಬೆಂಬಲ ಸೂಚಿಸಿದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಏನೂ ಮಾತನಾಡದೇ ಮೌನವಾಗಿ ಡಿಕೆ ಶಿವಕುಮಾರ್ ತೆರಳಿದ್ದಾರೆ.
