ಶಾಲೆಯಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಭೋದಿಸಬೇಕು ಎಂಬ ಕೂಗೂ ಸದಾ ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಶಾಲಾ ಮಕ್ಕಳಿಗೆ ಶಾಲಾ ಪಠ್ಯದ ಜತೆಗೆ ನೈತಿಕ ಶಿಕ್ಷಣ ಬೋಧಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಅಗತ್ಯ ಸಿದ್ಧತೆಗೆ ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದೆ.
ಧರ್ಮಗುರುಗಳ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆದಿದ್ದು, ಧರ್ಮಾತೀತವಾಗಿ ಎಲ್ಲಾ ಗುರುಗಳು ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಜಾರಿಯಾಗಬೇಕು ಎಂದು ಸಲಹೆ ನೀಡಿದ್ದಾರೆ. ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಸುವ ಸರ್ಕಾರದ ನಿರ್ಧಾರಕ್ಕೆ ಧರ್ಮಾತೀತವಾಗಿ ಧರ್ಮಗುರುಗಳು ಸಹಮತ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ನೈತಿಕ ಶಿಕ್ಷಣದಡಿ ಯಾವ್ಯಾವ ಕೃತಿ, ಗ್ರಂಥಗಳು, ವ್ಯಕ್ತಿಗಳ ಆದರ್ಶ, ಮೌಲ್ಯಗಳನ್ನು ತರಬೇಕು ಎನ್ನುವುದರ ಕುರಿತಂತೆ ಮತ್ತು ಭಗವದ್ಗೀತೆ ಸೇರಿ ಇತರ ಯಾವ್ಯಾವ ಮಹಾಕಾವ್ಯಗಳು, ಗ್ರಂಥಗಳು, ಕಥೆ, ಕವನಗಳನ್ನು ಆಯ್ಕೆ ಮಾಡಬೇಕೆಂದು ಪರಿಶೀಲಿಸಿ ವರದಿ ನೀಡಲು ಶಿಕ್ಷಣ ತಜ್ಞರ ಸಮಿತಿ ರಚಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಸಮಿತಿಗೆ ಶೀಘ್ರದಲ್ಲೇ ತಜ್ಞರ ನೇಮಕ ಪ್ರಕ್ರಿಯೆ ನಡೆಯಲಿದೆ. ಮೇ 16 ರಿಂದ ಶಾಲೆ ಆರಂಭವಾದರೂ ಮೇ 30 ರವರೆಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಸಕ್ತ ಸಾಲಿನ ಪಠ್ಯಕ್ರಮ ಬೋಧನೆ ಶುರುವಾಗಲಿದೆ. ಮೇ 30ರೊಳಗೆ ವರದಿ ನೀಡುವಂತೆ ತಜ್ಞರಿಗೆ ಸೂಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಸುಮಾರು 4 ಗಂಟೆಗಳ ಕಾಲ ಸಭೆ ನಡೆದಿದ್ದು, ಎಲ್ಲಾ ಧರ್ಮಗುರುಗಳ ಅಭಿಪ್ರಾಯಗಳನ್ನು ಶಿಕ್ಷಣ ಸಚಿವರು ಪಡೆದರು. ಸಭೆ ಬಳಿಕ ಮಾತನಾಡಿದ ಸಚಿವ ಬಿಸಿ ನಾಗೇಶ್, ಶ್ರೀಗಳು, ಧರ್ಮಗುರುಗಳ ಅಭಿಪ್ರಾಯ ಪಡೆಯಲಾಗಿದೆ. ನೈತಿಕ ಶಿಕ್ಷಣ ಜಾರಿ ಪ್ರಕ್ರಿಯೆಗೆ ಸಮಿತಿ ಮಾಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ಜಾರಿ ಮಾಡೋದಾಗಿ ತಿಳಿಸಿದರು
ಸಭೆಯಲ್ಲಿ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಸಿರಿಗೆರೆ ಶ್ರೀಗಳು, ರವಿಶಂಕರ್ ಗುರೂಜಿ, ಪೇಜಾವರ ಶ್ರೀಗಳು, ಮಾದಾರ ಚೆನ್ನಯ್ಯ ಶ್ರೀಗಳು, ರಾಘವೇಶ್ವರ ಶ್ರೀಗಳು, ಪೀಟರ್ ಮ್ಯಾಚಾರೋ, ಡಾ. ಕಸ್ತೂರಿ ರಂಗನ್, ಅಬ್ದುಲ್ ರಹೀಂ ಸೇರಿ ಹಲವು ಧರ್ಮಗಳ ಧರ್ಮಗುರುಗಳು ಭಾಗವಹಿಸಿ ಅಭಿಪ್ರಾಯ ತಿಳಿಸಿದರು.
ಸುತ್ತೂರು ಶ್ರೀಗಳು ರಾಮಾಯಣ, ಮಹಾಭಾರತ ನೀತಿ ಪಾಠದ ಜೊತೆ ಮಕ್ಕಳ ಮೊಬೈಲ್ ಗೀಳಿನ ಬಗ್ಗೆ ಪ್ರಸ್ತಾಪ ಮಾಡಿದರು. ಸಿರಿಗೆರೆ ಶ್ರೀಗಳು ಸಭೆಯಲ್ಲಿ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ಆದಿಚುಂಚನಗಿರಿ ಬಾಲ್ಯದಿಂದ ಮೌಲ್ಯ ಶಿಕ್ಷಣ ಸಿಗಬೇಕು ಎಂದು ತಿಳಿಸಿದರು. ಮುಸ್ಲಿಂ ಧರ್ಮಗುರುಗಳು ಹಾಗೂ ಕ್ರೈಸ್ತ ಧರ್ಮಗುರುಗಳು ನೈತಿಕ ಶಿಕ್ಷಣದ ಅವಶ್ಯಕತೆ ತಿಳಿಸಿದರು.
ನೈತಿಕ ಶಿಕ್ಷಣದ ಹೆಸರಿನಲ್ಲಿ ಕೇಸರಿಕರಣಕ್ಕೆ ಮುಂದಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್ ಪೋಷಕರ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಕೇವಲ ಈ ಮೂರು ಸಂಸ್ಥೆಗಳಲ್ಲದೇ ಹಲವರಿಂದ ಸಲಹೆಗಳನ್ನು ಕೇಳಲಾಗಿದೆ. ಎಲ್ಲಾ ಸಲಹೆಗಳನ್ನು ಗೌರವಯುತವಾಗಿ ಪರಿಗಣಿಸಿ ಪಠ್ಯಕ್ರಮ ಸಿದ್ಧಪಡಿಸಲಾಗುವುದು .ಶಾಲಾ ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣದ ಪಠ್ಯ ಇಲ್ಲದ ಹಿನ್ನೆಲೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
