Income Tax Cash Limit : ಹಣ (Cash)ಕಂಡರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತು ಹೆಚ್ಚು ಜನಪ್ರಿಯ.ಭಾರತ ಸರ್ಕಾರ ಬುಧವಾರ 9 ನವೆಂಬರ್ 2016 ರಿಂದ ಎಲ್ಲಾ ರೂ..500 ಮತ್ತು ರೂ. 1000 ಬ್ಯಾಂಕ್-ನೋಟುಗಳ ಅಮಾನ್ಯೀಕರಣವನ್ನು(demonetisation) ಘೋಷಣೆ ಮಾಡಿದ್ದು, ಕಪ್ಪು ಹಣ ಚಲಾವಣೆಗೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಪ್ರಧಾನಿ ಮೋದಿ ಸರ್ಕಾರ ನೋಟು ಅಮಾನ್ಯ ಮಾಡಿದ ಬಳಿಕವೂ ತಮ್ಮ ಬತ್ತಳಿಕೆಯಿಂದ ವಿಭಿನ್ನ ತಂತ್ರಗಳನ್ನು ಬಳಸಿ ಈಗಲೂ ಕಳ್ಳ ಹಣ ಸರಾಗವಾಗಿ ಹರಿದಾಡುತ್ತಿದೆ ಎಂಬುದಕ್ಕೆ ಆಗಾಗ ನಡೆಯುವ ಐಟಿ ದಾಳಿಗಳಲ್ಲಿ ಸಿಲುಕಿ ಬಿದ್ದ ಕೋಟ್ಯಂತರ ರೂ ಹೊಸ ನೋಟುಗಳೇ ಸಾಕ್ಷಿ ಎಂದರು ತಪ್ಪಾಗದು.
ಅಕ್ರಮವಾಗಿ ಹಣ ಸಂಗ್ರಹಣೆ ಮಾಡಿದವರಿಗೆ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೆ ಹಣವನ್ನು ಅಡಗಿಸಿ ಇಡುವ ಪ್ರಮೇಯ ರೂಡಿಸಿಕೊಂಡಿರುತ್ತಾರೆ. ಆದರೆ, ಎಷ್ಟೇ ಕಳ್ಳತನ ಮಾಡಿ ರಹಸ್ಯವಾಗಿ ಕೂಡಿಟ್ಟರು ಸತ್ಯ ಒಂದಲ್ಲ ಒಂದು ದಿನ ಹೊರ ಬರಲೇಬೇಕು ಎಂಬ ನೈಜ ಸತ್ಯ ಹೆಚ್ಚಿನವರಿಗೆ ತಿಳಿದಿದ್ದರೂ ಉಡಾಫೆ ಧೋರಣೆಯಿಂದ ಆನೆ ನಡೆದಿದ್ದೇ ದಾರಿ ಎಂಬಂತೆ ನಾವು ಮಾಡಿದ್ದೇ ಸರಿ ಎಂದು ಕಳ್ಳ ಮಾರ್ಗ ಹಿಡಿದು ಶ್ರೀಕೃಷ್ಣನ ಜನ್ಮ ಸ್ಥಳದಲ್ಲಿ ಜಾಗ ಪಡೆದುಕೊಂಡರು ಅಚ್ಚರಿಯಿಲ್ಲ. ಆದಾಯ ತೆರಿಗೆ ಇಲಾಖೆ ಇದೀಗ, ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ಎಂಬ ಮಿತಿಯ ಬಗ್ಗೆ ಮಾಹಿತಿ ನೀಡಿದ್ದು, ಆದಾಯ ತೆರಿಗೆ ಇಲಾಖೆ(Income Tax Department) ಅನೇಕ ಬದಲಾವಣೆಯನ್ನು ಮಾಡಿ ಹೊಸ ಯೋಜನೆ ಜಾರಿಗೆ ತಂದಿದೆ.
ಆದಾಯ ತೆರಿಗೆ ಇಲಾಖೆ (Income Tax Department) ತೆರಿಗೆ ವಂಚನೆ ಮತ್ತು ಕಪ್ಪು ಹಣದ ಹರಿವನ್ನು ತಡೆಯುವ ಸಲುವಾಗಿ ಭಾರತ ಸರ್ಕಾರವು ಒಬ್ಬರ ಬಳಿ ಎಷ್ಟು ನಗದನ್ನು ಇರಿಸಿಕೊಳ್ಳಬಹುದು ಎಂಬ ನಿಯಮ ಜಾರಿಗೆ ತಂದಿದ್ದು, ನಗದು ವಹಿವಾಟಿನ ಬಗ್ಗೆ ಹಲವಾರು ನಿಯಮಗಳನ್ನು ಮಾಡಿದೆ. ಈಗ ನಿಮಗೆಲ್ಲ ಹಾಗಿದ್ರೆ ಮನೆಯಲ್ಲಿ ಎಷ್ಟು ಹಣವನ್ನು ಇರಿಸಿಕೊಳ್ಳಬಹುದು? ಇದಕ್ಕೆ ಮಿತಿ ಇದೆಯೇ? ಎಂಬ ಅನುಮಾನ ಸಹಜವಾಗಿ ಮೂಡಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.
ನೋಟು ಅಮಾನ್ಯೀಕರಣದ ಬಳಿಕ, ಮನೆಯಲ್ಲಿ ಬಹಿರಂಗಪಡಿಸದೆ ಅಕ್ರಮವಾಗಿ ನಗದ ಕಂಡುಬಂದರೆ ಯಾವುದೇ ಸಾಕ್ಷಿ ಗಳಿಲ್ಲದೆ ಹೋದರೆ, ಮರುಪಡೆಯಲಾದ ಮೊತ್ತದ ಶೇಕಡಾ 137 ರಷ್ಟು ತೆರಿಗೆ ವಿಧಿಸಬಹುದು ಎಂದು ಆದಾಯ ತೆರಿಗೆ ಮಾಹಿತಿ ನೀಡಿದೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್‌ನ ನಿಯಮಗಳ ಪ್ರಕಾರ, ನೀವು ಹಣವನ್ನು ಠೇವಣಿ ಮಾಡುವ ಇಲ್ಲವೇ 50,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಾಗ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಪ್ರದರ್ಶಿಸಬೇಕು. ಒಂದು ವರ್ಷದಲ್ಲಿ ನೀವು 20 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡಿದ ಸಂದರ್ಭದಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಪ್ರದರ್ಶಿಸಬೇಕು. ಒಂದು ವೇಳೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಆಗದೇ ಇದ್ದರೆ, 20 ಲಕ್ಷದವರೆಗೆ ದಂಡವನ್ನು ವಿಧಿಸುವ ಸಾಧ್ಯತೆ ದಟ್ಟವಾಗಿದೆ.
ಮನೆಯಲ್ಲಿ ಹಣವನ್ನು (Income Tax Cash Limit) ಇಡುವುದು ಎರಡು ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದರೆ, ನೀವು ತೊಡಗಿಸಿಕೊಂಡ ಹಣಕಾಸಿನ ವಹಿವಾಟುಗಳು ಹಾಗೂ ನಿಮ್ಮ ಹಣಕಾಸಿನ ಸಾಮರ್ಥ್ಯ ಹೇಗಿದೆ ಎಂಬುದು ಮುಖ್ಯ ಪಾತ್ರ ವಹಿಸುತ್ತದೆ. ಈ ಆಧಾರದ ಮೇಲೆ, ನೀವು ಮನೆಯಲ್ಲಿ ಹಣ ಇರಿಸಿಕೊಳ್ಳಬಹುದು. ಆದರೆ, ಈ ಹಣದ ಮೂಲ ಯಾವುದು? ಎಂಬ ಪ್ರಶ್ನೆ ಉದ್ಭವಿಸಿದರೆ ಉತ್ತರ ನೀಡಲು ಪ್ರತಿ ಪೈಸೆಯ ಮೂಲ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ಮಾತ್ರ ನೆನಪಿಟ್ಟುಕೊಳ್ಳಿ.
ನಿಮ್ಮ ಆದಾಯದ ಮೂಲದ ಪುರಾವೆಗಳು ಜೊತೆಗೆ ನಿಮ್ಮ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ, ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಲು ಮುಂದಾದರೆ ಆಗ ನೀವು ಹಣದ ಮೂಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ. ಆದಾಯ ತೆರಿಗೆ ಇಲಾಖೆಯ ಅನುಸಾರ, ನೀವು ಮನೆಯಲ್ಲಿ ಎಷ್ಟು ಬೇಕಾದರೂ ಹಣವನ್ನು ಇಟ್ಟುಕೊಳ್ಳಬಹುದು ಆದರೆ ಈ ಹಣಕ್ಕೆ ಪೂರಕ ಸಾಕ್ಷಿ ಬೇಕಾಗುತ್ತವೆ. ಇದರೊಂದಿಗೆ ಐಟಿಆರ್ ಘೋಷಣೆ ಕೂಡ ಪ್ರದರ್ಶಿಸಬೇಕು. ಒಂದು ವೇಳೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
