Karnataka Budget 2025: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಎರಡನೇ ಬಜೆಟ್ ಮಂಡನೆಯಾಗಿದೆ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 16ನೇ ಬಜೆಟ್ ಆಗಿದ್ದು 4 ಲಕ್ಷ ಕೋಟಿ ಗಾತ್ರವನ್ನು ಹೊಂದಿದೆ. ಕೃಷಿ, ಶಿಕ್ಷಣ, ಅಲ್ಪಸಂಖ್ಯಾತರು, ಮಹಿಳೆಯರು ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಬಜೆಟ್ ನಲ್ಲಿ ಭರ್ಜರಿ ಕೊಡುಗೆ ಸಿಕ್ಕಿದೆ. ಅಂತೆಯೇ ಜಾನುವಾರುಗಳ ಆಕಸ್ಮಿಕ ಸಾವಿನಿಂದ ರೈತರು ಅನುಭವಿಸುವ ಆರ್ಥಿಕ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಜಾರಿಗೆ ತರಲಾಗಿದ್ದು, ಇದರಡಿ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹೌದು, 2025-26ನೆ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ಈಗಾಗಲೇ ಅನುಗ್ರಹ ಯೋಜನೆ ಜಾರಿಗೆ ತರಲಾಗಿದ್ದು, ಇದರಡಿ ಹಸು, ಎಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10 ಸಾವಿರದಿಂದ 15 ಸಾವಿರ ರೂ.ಗಳಿಗೆ, ಕುರಿ-ಮೇಕೆಗಳಿಗೆ ನೀಡುತ್ತಿರುವ 5 ಸಾವಿರ ರೂ.ಗಳಿಂದ 7500ರೂ. ಹಾಗೂ 3 ರಿಂದ 6 ತಿಂಗಳ ಕುರಿ, ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3500ರೂ.ಗಳಿಂದ 5000ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
