Pakistan: ಭಾರತದೊಂದಿಗೆ(India) ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, “ಭಾರತವು ಗಡಿ ನಿಯಂತ್ರಣ ರೇಖೆಯಲ್ಲಿ (LOC) ಯಾವುದೇ ಕ್ಷಣದಲ್ಲಿ ದಾಳಿ ಮಾಡಬಹುದು ಎಂಬ ವರದಿಗಳಿವೆ” ಎಂದು ಹೇಳಿದರು. ಪಾಕಿಸ್ತಾನದ ಮಾಹಿತಿ ಸಚಿವ ಅಲ್ಲಾ ತರಾರ್ ಕೂಡ ಕಳೆದ ವಾರ ಸನ್ನಿಹಿತ ದಾಳಿಯ ಬಗ್ಗೆ “ವಿಶ್ವಾಸಾರ್ಹ ಗುಪ್ತಚರ” ಮಾಹಿತಿ ಇದೆ ಎಂದು ಹೇಳಿಕೊಂಡಿದ್ದರು. ಏಪ್ರಿಲ್ 22ರಂದು ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು.
ಎಲ್‌ಒಸಿಯಲ್ಲಿ ಭಾರತ ಯಾವುದೇ ಕ್ಷಣದಲ್ಲಿ, ಯಾವುದೇ ಸ್ಥಳದ ಮೇಲೆ ದಾಳಿ ಮಾಡಬಹುದು ಎಂಬ ಮಾಃಇತಿಯಿದೆ. ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಗುಡುಗಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಅವರು, ರಾಜಕೀಯ ಲಾಭಕ್ಕಾಗಿ ಕೆಲ ಪ್ರದೇಶವನ್ನು ಯುದ್ಧದ ಅಂಚಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಹಲ್ಗಾಮ್ ದಾಳಿಯ ಬಗ್ಗೆ ಅಂತರರಾಷ್ಟ್ರೀಯ ತನಿಖೆಗೆ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಒತ್ತಾಯಿಸಿದ್ದಾರೆ ಎಂದು ಹೇಳಿರುವ ಆಸಿಫ್, ಇಂತಹ ತನಿಖೆಯಿಂದ ಭಾರತವೇ ಈ ದಾಳಿಯಲ್ಲಿ ಭಾಗಿಯಾಗಿದೆಯೇ ಅಥವಾ ಯಾವುದಾದರೂ ಆಂತರಿಕ ಗುಂಪು ಭಾಗಿಯಾಗಿದೆಯೇ ಎಂಬುದು ಸ್ಪಷ್ಟವಾಗುತ್ತದೆ. ಆಧಾರರಹಿತ ಆರೋಪಗಳ ಹಿಂದಿನ ಸತ್ಯವನ್ನು ಈ ಮೂಲಕ ಬಹಿರಂಗಪಡಿಸುತ್ತದೆ ಎಂದು ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.
