Home » ಇನ್ನು ಮುಂದೆ ಭಾರತದ ಕಂಪನಿಗಳಲ್ಲಿ ವಾರಕ್ಕೆ ಬರೋಬ್ಬರಿ 3 ದಿನ ರಜೆ | ಕೇಂದ್ರ ಸರಕಾರ ತರ್ತಿದೆ ಹೊಸ ಕಾನೂನು

ಇನ್ನು ಮುಂದೆ ಭಾರತದ ಕಂಪನಿಗಳಲ್ಲಿ ವಾರಕ್ಕೆ ಬರೋಬ್ಬರಿ 3 ದಿನ ರಜೆ | ಕೇಂದ್ರ ಸರಕಾರ ತರ್ತಿದೆ ಹೊಸ ಕಾನೂನು

by Praveen Chennavara
0 comments

ಕೇಂದ್ರ ಸರ್ಕಾರವು ಕಂಪೆನಿಗಳ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡುವ ನಿಯಮವನ್ನು ಜಾರಿಗೆ ತರುವ ಚಿಂತನೆಯಲ್ಲಿದೆ.

ಈ ಚಿಂತನೆ ಜಾರಿಯಾದರೆ ಮುಂದಿನ ಏಪ್ರಿಲ್‌ ತಿಂಗಳಿನಿಂದ ಉದ್ಯೋಗಿಗಳಿಗೆ ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಇರಲಿದೆ. ಮೂರು ದಿನ ರಜೆ ಇರಲಿದೆಯಾದರೂ, ಕೆಲಸ ಮಾಡುವ ನಾಲ್ಕು ದಿನವೂ ದಿನಕ್ಕೆ 12 ಗಂಟೆಗಳ ಕಾಲ ದುಡಿಯಬೇಕಾಗುತ್ತದೆ

ವೇತನ, ಸಾಮಾಜಿಕ ಭದ್ರತೆ, ಕೈಗಾರಿಕೆ ಮತ್ತು ವೃತ್ತಿಪರ ಸುರಕ್ಷತೆಗೆ ಸಂಬಂಧಿಸಿದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಮುಂದಿನ ವಿತ್ತೀಯ ವರ್ಷದ ಆರಂಭದಲ್ಲಿ (2022ರ ಏಪ್ರಿಲ್‌ 1) ಜಾರಿಯಾಗುವ ಸಾಧ್ಯತೆಯಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹೊಸ ನಿಯಮಗಳ ಪ್ರಕಾರ, ಉದ್ಯೋಗಿಗಳ ಟೇಕ್‌ಹೋಂ ವೇತನ, ಕೆಲಸದ ಅವಧಿ ಮತ್ತು ಕೆಲಸದ ದಿನಗಳು ಸೇರಿದಂತೆ ಒಟ್ಟಾರೆ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆಯಾಗಲಿದೆ.

ವೇತನಕ್ಕೆ ಕತ್ತರಿ, ಪಿಎಫ್ ಹೆಚ್ಚಳ:

ಪ್ರಸ್ತಾವಿತ ಕಾರ್ಮಿಕ ಸಂಹಿತೆಯನ್ನು ಪರಿಶೀಲಿಸುತ್ತಿರುವ ತಜ್ಞರ ಪ್ರಕಾರ, ಹೊಸ ಕಾನೂನು ಜಾರಿಯಾದರೆ ಉದ್ಯೋಗಿಗಳ ವೇತನ ಮತ್ತು ಭವಿಷ್ಯ ನಿಧಿ(ಪಿಎಫ್) ಲೆಕ್ಕಾಚಾರದಲ್ಲಿ ಮಹತ್ವದ ಬದಲಾವಣೆ ಆಗಲಿದೆ.

ಪ್ರತಿ ತಿಂಗಳು ಉದ್ಯೋಗಿಯು ತನ್ನ ಪಿಎಫ್ ಖಾತೆಗೆ ನೀಡುವ ಮೊತ್ತವು ಹೆಚ್ಚಲಿದೆ. ಆದರೆ, ಉದ್ಯೋಗಿಯ ಕೈಗೆ ಬರುವ ಸಂಬಳವು ಕಡಿಮೆಯಾಗಲಿದೆ.

ಹೊಸ ನಿಯಮದ ಪ್ರಕಾರ, ಉದ್ಯೋಗಿಗೆ ಭತ್ಯೆಯ ರೂಪದಲ್ಲಿ ಸಿಗುವ ಮೊತ್ತವು ವೇತನದ ಶೇ.50ಕ್ಕಿಂತ ಹೆಚ್ಚಾಗಬಾರದು.

ಉದ್ಯೋಗಿ ಪಡೆಯುವ ಒಟ್ಟಾರೆ ವೇತನದಲ್ಲಿ ಶೇ.50 ಭತ್ಯೆಗಳಾದರೆ, ಉಳಿದ ಶೇ.50 ಮೂಲ ವೇತನವಾಗಿರಬೇಕು. ಪಿಎಫ್ಗೆ ಜಮೆ ಮಾಡುವ ಮೊತ್ತವನ್ನು ಇದೇ ಮೂಲ ವೇತನವನ್ನು ಆಧರಿಸಿ ಲೆಕ್ಕ ಮಾಡಲಾಗುತ್ತದೆ. ಹೀಗಾಗಿ, ಉದ್ಯೋಗಿಯ ಕಡೆಯಿಂದ ಪಿಎಫ್ಗೆ ಹೋಗುವ ಮೊತ್ತ ಹೆಚ್ಚುತ್ತದೆ. ವೇತನ ಮಾತ್ರ ಇಳಿಯಲಿದೆ.

ಇದೇ ವೇಳೆ, ಉದ್ಯೋಗದಾತ ಕಂಪನಿಗಳು ಕೂಡ ಪಿಎಫ್ಗೆ ಹೆಚ್ಚಿನ ಮೊತ್ತವನ್ನೇ ಜಮೆ ಮಾಡಬೇಕಾಗುತ್ತದೆ. ಉದಾಹರಣೆಗೆ, ಒಬ್ಬ ಉದ್ಯೋಗಿಯ ವೇತನವು ತಿಂಗಳಿಗೆ 50 ಸಾವಿರ ರೂ. ಇದ್ದರೆ ಅವನ ಮೂಲ ವೇತನ 25 ಸಾವಿರ ರೂ. ಆಗುತ್ತದೆ. ಉಳಿದ 25 ಸಾವಿರ ರೂ. ಭತ್ಯೆ ಎಂದು ಪರಿಗಣಿಸಲ್ಪಡುತ್ತದೆ. ಮೂಲ ವೇತನವು ಹೆಚ್ಚಾದಂತೆ, ಪಿಎಫ್ಗೆ ನೀಡುವ ಮೊತ್ತವೂ ಹೆಚ್ಚುತ್ತದೆ.

ಈ ಸಂಹಿತೆಗಳಿಗೆ ಸಂಬಂಧಿಸಿದ ಕರಡು ನಿಯಮಗಳನ್ನು 2021ರ ಫೆಬ್ರವರಿಯಲ್ಲೇ ಕೇಂದ್ರ ಸರ್ಕಾರವು ಅಂತಿಮಗೊಳಿಸಿದೆ. ಆದರೆ, ಏಕಕಾಲಕ್ಕೆ ರಾಜ್ಯಗಳೂ ಈ ನಿಯಮಗಳನ್ನು ಜಾರಿ ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರದ ಬಯಕೆಯಾಗಿದೆ.

ಈ ನಿಯಮದಿಂದ ಆಗಬಹುದಾದ ಬದಲಾವಣೆಗಳೇನು?

– ವಾರದಲ್ಲಿ ಕೇವಲ ನಾಲ್ಕು ದಿನ ಮಾತ್ರ ಕೆಲಸ ಇರಲಿದೆ
– ಆ ನಾಲ್ಕೂ ದಿನ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು
– ಪ್ರತಿ ಉದ್ಯೋಗಿಯು ವಾರದಲ್ಲಿ 48 ಗಂಟೆ ಕೆಲಸ ಮಾಡುವುದು ಕಡ್ಡಾಯ
– ಉದ್ಯೋಗಿಯ ಕೈಗೆ ಸಿಗುವ ವೇತನ ಕಡಿತಗೊಳ್ಳಲಿದೆ.
– ಕಂಪನಿಗಳಿಗೆ ಭವಿಷ್ಯ ನಿಧಿಯ ಹೊಣೆಗಾರಿಕೆಯ ಹೊರೆ ಹೆಚ್ಚಲಿದೆ

You may also like

Leave a Comment