India-Russia : ಭಾರತದ ಮೇಲೆ ಇತ್ತೀಚೆಗಷ್ಟೇ ಶೇ.25ರಷ್ಟು ಪ್ರತಿತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ದಂಡದ ರೂಪದಲ್ಲಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಭಾರತ ಮತ್ತು ರಷ್ಯಾ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿವೆ.
ಹೌದು, ಅಲೂಮಿನಿಯಂ, ರಸಗೊಬ್ಬರ, ರೈಲ್ವೇ ಸಾರಿಗೆ, ಗಣಿಗಾರಿಕೆ ತಂತ್ರಜ್ಞಾನ, ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢಗೊಳಿಸಲು ಎರಡೂ ದೇಶಗಳು ಒಡಂಬಡಿಕೆ ಮಾಡಿಕೊಂಡಿವೆ. ಈ ಒಪ್ಪಂದವು ಭಾರತ-ರಷ್ಯಾ ಆಧುನೀಕರಣ ಮತ್ತು ಔದ್ಯಮಿಕ ಸಹಕಾರದ ಕಾರ್ಯಕಾರಿ ಗುಂಪಿನ 11ನೇ ಅಧಿವೇಶನದ ವೇಳೆ ದೆಹಲಿಯ ವಾಣಿಜ್ಯ ಭವನದಲ್ಲಿ ನಡೆದ ಸಭೆಯಲ್ಲಿ ಜಾರಿಗೆ ಬಂದಿದೆ.
ಅಂದಹಾಗೆ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ, ಭಾರತವು ತನ್ನ ಆರ್ಥಿಕ ಮತ್ತು ಕೈಗಾರಿಕಾ ಸಹಕಾರವನ್ನು ರಷ್ಯಾದಂತಹ ದೇಶಗಳೊಂದಿಗೆ ವಿಸ್ತರಿಸುವ ಮೂಲಕ ತನ್ನ ವ್ಯಾಪಾರ ತಂತ್ರವನ್ನು ಬಲಪಡಿಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ಹಿತಾಸಕ್ತಿಯನ್ನು ಕಾಪಾಡಲು ಯಾವುದೇ ನಷ್ಟಕ್ಕೆ ಸಿದ್ಧ ಎಂದು ಟ್ರಂಪ್‌ಗೆ ಸವಾಲೆಸೆದಿರುವುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ.
