CRPF: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸಂದಿಗ್ಧತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜತಾಂತ್ರಿಕದ ದೃಷ್ಟಿಯಿಂದ ಭಾರತ ಪಾಕಿಸ್ತಾನ ಪ್ರಜೆಗಳನ್ನು ಭಾರತದಿಂದ ಹೊರ ಅಟ್ಟುತ್ತಿದೆ. ಇದರ ನಡುವೆಯೇ ಭಾರತೀಯ ಯೋಧನೊಬ್ಬ ವಿಡಿಯೋ ಕಾಲ್ ಮುಖಾಂತರ ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿರುವ ಸಂಗತಿ ಬಯಲಾಗಿದೆ.
ಹೌದು, CRPF ಯೋಧ ಮುನೀರ್ ಅಹಮದ್ ಪಾಕಿಸ್ತಾನದ ಯುವತಿಯನ್ನು ಮದುವೆಯಾಗಿದ್ದಾರೆ. ಅಂದಹಾಗೆ ಮುನೀರ್ ಅಹಮದ್ ಅವರು ಪಾಕಿಸ್ತಾನದ ಯುವತಿ ಮೆನಾಲ್ ಖಾನ್ ಅವರನ್ನ ಪ್ರೀತಿಸಿದ್ದರು. ಮೆನಾಲ್ ಖಾನ್ ಜೊತೆ ವಿವಾಹಕ್ಕೆ CRPF ಬಳಿ ಅನುಮತಿಯನ್ನು ಕೋರಿದ್ದಾರೆ. ಯೋಧನಿಗೆ ಅನುಮತಿ ನೀಡುವ ಮುನ್ನವೇ ಮುನೀರ್ ಅಹಮದ್ ಅವರು ವಾಟ್ಸಾಪ್ ವಿಡಿಯೋ ಕಾಲ್‌ನಲ್ಲಿ ವಿವಾಹವಾಗಿದ್ದಾರೆ.
ಇನ್ನು CRPF ಯೋಧನಿಗೆ ಪಾಕ್ ಯುವತಿಯನ್ನು ವಿವಾಹವಾಗಲು NOC ನೀಡಿರಲಿಲ್ಲ. ಅಲ್ಲದೇ ತನ್ನ ಪತ್ನಿ ಮೆನಾಲ್ ಖಾನ್ ಅನಧಿಕೃತವಾಗಿ ಭಾರತದಲ್ಲಿ ವಾಸಿಸುತ್ತಿರುವ ಬಗ್ಗೆ ಮುನೀರ್ ಅಹಮದ್ ಅವರು ಸಿಆರ್‌ಪಿಎಫ್‌ಗೂ ಮಾಹಿತಿ ನೀಡಿರಲಿಲ್ಲ. CRPF ಯೋಧ ಮುನೀರ್ ಅಹಮದ್ ವಿರುದ್ಧ ರಾಷ್ಟ್ರದ ಭದ್ರತೆಗೆ ಆತಂಕ ಮತ್ತು ಕಾನೂನು ಪ್ರಕ್ರಿಯೆಗಳ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ಹೀಗಾಗಿ ಸಿಆರ್‌ಪಿಎಫ್‌ನಿಂದ ಮುನೀರ್ ಅಹಮದ್ ವಿರುದ್ಧ ಶಿಸ್ತುಕ್ರಮದ ಪ್ರಕ್ರಿಯೆ ಆರಂಭಿಸಿದ್ದು, ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.
ಮುನೀರ್ ಅಹ್ಮದ್ ರನ್ನು ಕೊನೆಯದಾಗಿ ದೇಶದ ಪ್ರಮುಖ ಆಂತರಿಕ ಭದ್ರತಾ ಪಡೆ, ಪ್ಯಾರಾಮಿಲಿಟರಿ CRPF ನ 41 ನೇ ಬೆಟಾಲಿಯನ್‌ನಲ್ಲಿ ನಿಯೋಜಿಸಲಾಗಿತ್ತು.ವಿಚಾರಣೆ ನಡೆಸುವ ಅಗತ್ಯವಿಲ್ಲದ ನಿಯಮಗಳ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು PTI ಗೆ ತಿಳಿಸಿವೆ.
ಅಲ್ಲದೆ ಮುನೀರ್ ಅಹ್ಮದ್ ಸೇವಾ ನಡವಳಿಕೆಯನ್ನು ಉಲ್ಲಂಘಿಸಿದ್ದು, ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವೆಂದು ಕಂಡುಬಂದಿದ್ದಾರೆ ಎಂದು CRPF ವಕ್ತಾರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (DIG) ಎಂ.ದಿನಕರನ್ ಹೇಳಿದ್ದಾರೆ.
