Home » ಮನೆಯಲ್ಲಿ ಮದ್ಯ ಇಟ್ಟುಕೊಳ್ಳುವ ನಿಯಮ ಬದಲು, ಸ್ವಿಗ್ಗಿಯಲ್ಲೂ ಸಿಗುತ್ತಾ ಪೆಗ್ಗು?

ಮನೆಯಲ್ಲಿ ಮದ್ಯ ಇಟ್ಟುಕೊಳ್ಳುವ ನಿಯಮ ಬದಲು, ಸ್ವಿಗ್ಗಿಯಲ್ಲೂ ಸಿಗುತ್ತಾ ಪೆಗ್ಗು?

0 comments
Liquor Price

ಸುವರ್ಣ ವಿಧಾನಸೌಧ: ಕರಾವಳಿ ತೀರದ ಪ್ರದೇಶಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ನಡೆಯುತ್ತಿದೆ. ಅದನ್ನು ತಪ್ಪಿಸಲು ಅಧಿಕೃತವಾಗಿಯೇ ಪರವಾನಗಿ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೇಳಿದ್ದಾರೆ.

ಇದೀಗ ಮನೆಯಲ್ಲಿ 7 ಬಾಟಲಿಗಳಷ್ಟು ಮಾತ್ರ ಮದ್ಯ ಇಟ್ಟು ಕೊಳ್ಳಬೇಕೆಂಬ ನಿಯಮವಿದೆ. ಯಾರೋ ಒಬ್ಬರು ಬಂದು ಬಾಟಲಿ ಉಡುಗೊರೆ ಕೊಡುತ್ತಾರೆ. ಮತ್ಯಾರೋ ಬಂದು ಕೇಸು ಹಾಕುತ್ತಾರೆ. ಇದನ್ನು ತಪ್ಪಿಸಲು ಕ್ರಮ ಬದ್ಧಗೊಳಿಸಬೇಕು. ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಅಬಕಾರಿ ಸಚಿವ ಆ‌ರ್.ಬಿ. ತಿಮ್ಮಾಪುರ ಅವರಿಗೆ ಸಲಹೆ ನೀಡಿದರು.

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಡಿ.ಕೆ.ಶಿವಕುಮಾರ್, ‘ಸ್ವಿಗ್ಗಿಯಂತಹ ಆ್ಯಪ್‌ಗಳ ಮೂಲಕ ಪ್ರತಿಯೊಂದು ವಸ್ತುವೂ ಮನೆ ಬಾಗಿಲಿಗೆ ಬರುತ್ತಿದೆ. ಮದ್ಯವೂ ಬರುತ್ತಿಲ್ಲ ಎಂಬುದಕ್ಕೆ ಗ್ಯಾರಂಟಿ ಏನು?’ ಎಂದು ಪ್ರಶ್ನಿಸಿದರು.

‘ಈಗ ಕಡಲ ತೀರಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿಯಿಲ್ಲ. ಆದರೆ, ಬೀಚಲ್ಲಿ ಬಿಯರ್ ಸಿಗುತ್ತದೆ. ಇದನ್ನು ತಪ್ಪಿಸಲು ಅಧಿಕೃತವಾಗಿ ಅನುಮತಿ ನೀಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ’ ಎಂದು ಡಿಕೆಶಿ ಹೇಳಿದರು.

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮನೆಗಳಲ್ಲಿ ಪದ್ಯ ಇಟ್ಟುಕೊಳ್ಳುವ ನಿಯಮ ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಶೇಖರಿಸಿ ಇಟ್ಟುಕೊಳ್ಳುವ ನಿಯಮ ಬರಬಹುದು. ಅಲ್ಲದೆ, ಕರಾವಳಿ ಭಾಗದಲ್ಲಿ, ಭೌಗೋಳಿಕವಾಗಿ ದೂರದ ಪ್ರದೇಶಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ ಸೀಮಿತ ಪ್ರಮಾಣದ ಮಧ್ಯ ಮಾರಾಟಕ್ಕೆ ಅವಕಾಶ ಸಿಗುತ್ತಾ ಅದಕ್ಕೋಸ್ಕರ ಪರ್ಮಿಟ್ ಲೈಸನ್ಸ್ ಕೊಡಲಾಗುತ್ತದೆಯಾ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಜತೆಗೆ, ತರಿಸಿಕೊಳ್ಳಬಹುದಾ? ಇತ್ಯಾದಿ ನಿರ್ಧಾರಗಳನ್ನು ಶೀಘ್ರದಲ್ಲೇ ಸರ್ಕಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

You may also like