Iran-Israel War: ಇರಾನ್ ಮೇಲೆ ದಾಳಿ ನಡೆಸಲು ಇಸ್ರೇಲ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅಮೆರಿಕದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಬಿಎಸ್ ವರದಿ ಹೇಳಿದೆ. ಇರಾನ್‌ನ ಪ್ರತೀಕಾರದ ಭಯದಿಂದ ಅಮೆರಿಕ ತನ್ನ ಕೆಲವು ಸಿಬ್ಬಂದಿಯನ್ನು ಮಧ್ಯಪ್ರಾಚ್ಯದಿಂದ ವಾಪಸ್ ಕರೆಯುತ್ತಿರುವುದರ ನಡುವೆ ಈ ವರದಿ ಬಂದಿದೆ. ಅಮೆರಿಕದ ರಕ್ಷಣಾ ಇಲಾಖೆಯು ಮಿಲಿಟರಿ ಸಿಬ್ಬಂದಿಯ ಅವಲಂಬಿತರಿಗೆ ಮಧ್ಯಪ್ರಾಚ್ಯದ ಪ್ರದೇಶವನ್ನು ತೊರೆಯಲು ಅಧಿಕಾರ ನೀಡಿದೆ.
ಮಧ್ಯಪ್ರಾಚ್ಯದಿಂದ ಅಮೆರಿಕದ ಸಿಬ್ಬಂದಿಯನ್ನು ಸ್ಥಳಾಂತರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅದು ಅಪಾಯಕಾರಿ ಸ್ಥಳವಾಗಬಹುದು” ಎಂದರು. ಇರಾನ್‌ನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ದಾಳಿ ನಡೆಸುವ ಭೀತಿಯ ಮಧ್ಯೆ ಅಮೆರಿಕ ಈ ಕ್ರಮ ಕೈಗೊಂಡಿದೆ. ಇರಾನ್ ಮೇಲೆ ದಾಳಿ ನಡೆಸಿದರೆ, ಆ ಪ್ರದೇಶದಲ್ಲಿನ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬುಧವಾರ ಇರಾನ್ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಹೇಳಿದ್ದರು.
ಇರಾನ್ ಜತೆ ಪರಮಾಣು ಒಪ್ಪಂದ ಮಾಡಿಕೊಳ್ಳುವ ಟ್ರಂಪ್ ಅವರ ಪ್ರಯತ್ನಗಳು ಸ್ಥಗಿತಗೊಂಡಂತೆ ಕಂಡುಬರುತ್ತಿರುವುದರ ನಡುವೆ ಈ ಬೆಳವಣಿಗೆ ಸಂಭವಿಸಿದೆ. ಇರಾನ್‌ನ ಪರಮಾಣು ಸೌಲಭ್ಯಗಳ ವಿರುದ್ಧ ದಾಳಿಗೆ ಇಸ್ರೇಲ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಸೂಚಿಸಿದೆ.
