Gujarath : ಗುಜರಾತಿನವರು ಉದ್ಯಮದಲ್ಲಿ ಹಾಗೂ ವ್ಯವಹಾರಗಳಲ್ಲಿ ಎತ್ತಿದ ಕೈ ಎಂದು ಹೇಳುತ್ತಾರೆ. ಅದರಲ್ಲೂ ಕೂಡ ಗುಜರಾತಿನಲ್ಲಿ ಹೆಚ್ಚಾಗಿರುವ ಜೈನ ಸಮುದಾಯದವರು ಬುದ್ದಿವಂತಿಕೆಯಿಂದ ವ್ಯವಹಾರ ನಡೆಸಿ ಸೈ ಎನಿಸಿಕೊಳ್ಳುತ್ತಾರೆ. ಅಂತೆಯೇ ಇದೀಗ ಗುಜರಾತಿನ ಜೈನ ಸಂಘಟನೆ ಒಂದು ಒಟ್ಟೊಟ್ಟಿಗೆ ಬರೋಬ್ಬರಿ 186 ಕೋಟಿ ರೂಪಾಯಿಗಳ ಕಾರನ್ನು ಖರೀದಿಸಿ ಅದಕ್ಕೆ 21 ಕೋಟಿ ರಿಯಾಯಿತಿಯನ್ನು ಪಡೆದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು, ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ( ಜೀತೋ ) ದೇಶಾದ್ಯಂತ 60 ಲಕ್ಷದಿಂದ 1.34 ಕೋಟಿ ರೂ . ವರೆಗಿನ 186 ಐಷಾರಾಮಿ ಕಾರುಗಳನ್ನು ಏಕಕಾಲಕ್ಕೆ ಖರೀದಿಸುವ ಮೂಲಕ 21.22 ಕೋಟಿ ರೂ . ರಿಯಾಯಿತಿ ಪಡೆದುಕೊಂಡಿದೆ .
ದೇಶಾದ್ಯಂತ 65 ಸಾವಿರ ಸದಸ್ಯರನ್ನು ಹೊಂದಿರುವ ಈ ಜೈನ ಸಂಘಟನೆ ತನ್ನ ಸದಸ್ಯರಿಗಾಗಿ ಬಿಎಂಡಬ್ಲ್ಯು , ಮರ್ಸಿಡಸ್ ಸೇರಿದಂತೆ 15 ಬ್ರ್ಯಾಂಡ್ ಗಳೊಂದಿಗೆ ಮಾತುಕತೆ ನಡೆಸಿ ಈ ಡೀಲ್ ಕುದುರಿಸಿದೆ . ಈ ಬ್ರ್ಯಾಂಡ್ ಗಳ ಮೂಲಕ ಖಚಿತ ಲಾಭಗಳು ಮತ್ತು ಕಡಿಮೆ ಮಾರ್ಕೆಟಿಂಗ್ ವೆಚ್ಚಗಳಿಂದ ಪ್ರಯೋಜನ ಪಡೆದು , ಅದನ್ನು ತನ್ನ ಸದಸ್ಯರಿಗೆ ವರ್ಗಾಯಿಸಿದೆ . ಸಾಮುದಾಯಿಕ ಖರೀದಿಯಡಿ ದೇಶಾದ್ಯಂತ 149.54 ಕೋಟಿ ರೂ . ಮೌಲ್ಯದ ಕಾರುಗಳನ್ನು ಖರೀದಿಸಿ , 21.22 ಕೋಟಿ ರೂ . ಉಳಿತಾಯ ಮಾಡಿದ್ದು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ.
