Chitra Tripati: ಗಂಡ- ಹೆಂಡತಿಯ ಹೊಂದಾಣಿಕೆಯ ಮೇಲೆ ದಾಂಪತ್ಯ ಜೀವನ ನಿಂತಿರುತ್ತದೆ. ಎಷ್ಟೇ ಹೊಂದಾಣಿಕೆಯಿಂದ ಇದ್ದರೂ ಕೂಡ ಕೆಲವೊಮ್ಮೆ ಮೂರನೇ ವ್ಯಕ್ತಿಯಿಂದ ಇಡೀ ಸಂಸಾರವೇ ಹಾಳಾಗುವಂತಹ ಸಂದರ್ಭ ಬಂದುದಾಗುತ್ತದೆ. ಇದೀಗ ಅಂತದ್ದೇ ಒಂದು ಘಟನೆ ಕ್ಯಾತ ನಿರೂಪಕಿ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ.
ಹೌದು, ಭಾರತದ ಖ್ಯಾತ ನಿರೂಪಕಿಯಾಗಿರುವ ಚಿತ್ರ ತ್ರಿಪಾಠಿ (Chitra Tripati) ಅವರ ದಾಂಪತ್ಯ ಬದುಕಲ್ಲಿ ಇದೀಗ ಬಿರುಗಾಳಿ ಎದ್ದಿದೆ. ಚಿತ್ರಾ ತ್ರಿಪಾಠಿ, ಭಾರತದ ಪ್ರಖ್ಯಾತ ಸುದ್ದಿ ನಿರೂಪಕಿ. ಸುದ್ದಿ ಮಾಧ್ಯಮದಲ್ಲಿ ಅತ್ಯಂತ ಹೆಚ್ಚು ಸಂಬಳ ಪಡೆಯುವ ಕೆಲವೇ ಕೆಲ ಆಂಕರ್‌ಗಳಲ್ಲಿ ಚಿತ್ರಾ ತ್ರಿಪಾಠಿ ಕೂಡ ಒಬ್ಬರು. ಎಬಿಪಿ ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡುವ ಮೂಲಕ ಹೆಸರು ಸಂಪಾದಿಸಿದ ಚಿತ್ರಾ ಆನಂತರ ಆಜ್ ತಕ್ ವಾಹಿನಿಯಲ್ಲಿ ಸಂಪಾದಕಿಯಾಗಿ ಕೆಲಸ ಮಾಡಿದರು. ಇಷ್ಟೆಲ್ಲ ಖ್ಯಾತಿಗಳಿಸಿರುವ ಚಿತ್ರಾ ತ್ರಿಪಾಠಿ ಇದೀಗ ತಮ್ಮ 16 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಪತಿ ಅತುಲ್ ಅಗರ್‌ವಾಲ್ ಅವರಿಂದ ದೂರವಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ಧಾರೆ.
ಚಿತ್ರಾ ತ್ರಿಪಾಠಿ 2009ರಲ್ಲಿ ಅತುಲ್ ಅಗರ್‌ವಾಲ್ ಅವರನ್ನು ಮದುವೆಯಾಗಿದ್ದರು. ವಿಶೇಷ ಅಂದರೆ ಅತುಲ್ ಕೂಡ ವೃತ್ತಿಯಲ್ಲಿ ಪರ್ತಕರ್ತರು. ‘ಹಿಂದಿ ಖಬರ್’ ವಾಹಿನಿಯ ನಿರ್ದೇಶಕರಾಗಿರುವ ಅತುಲ್ ಈ ಚಾನೆಲ್‌ನ ಪ್ರಧಾನ ಸಂಪಾದಕರು ಕೂಡ ಹೌದು. ಅನೇಕ ದೊಡ್ಡ ದೊಡ್ಡ ಟಿವಿ ಚಾನಲ್ ಗಳಲ್ಲಿ ಕೆಲಸ ಮಾಡಿರುವಂತಹ ಅನುಭವ ಇವರದು. ಇಂತಹ ಹಿನ್ನೆಲೆಯುಳ್ಳ ಚಿತ್ರಾ ತ್ರಿಪಾಠಿ ಮತ್ತು ಅತುಲ್ ಅಗರ್‌ವಾಲ್ ಈಗ ತಮ್ಮ 16 ವರ್ಷದ ದಾಂಪತ್ಯಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.
ವಿಚ್ಛೇದನಕ್ಕೆ ಕಾರಣ?
2022ರಲ್ಲಿ ಅತುಲ್ ಅಗರ್‌ವಾಲ್ ತಮ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ, ತನ್ನನ್ನೂ ಅಪಹರಿಸಿ ದರೋಡೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಅತುಲ್ ಅಗರ್‌ವಾಲ್ ಟ್ವಿಟ್ ಮಾಡಿದ್ದರು. ಸಾಲದಕ್ಕೆ ಉತ್ತರ ಪ್ರದೇಶದ ಪೊಲೀಸರಿಗೆ ಟ್ಯಾಗ್ ಕೂಡ ಮಾಡಿದ್ದರು. ಆದರೆ ಆ ನಂತರ ದೂರನ್ನು ನೀಡಲಿಲ್ಲ. ಆದರೂ ಕೂಡ ಕಾರ್ಯಪ್ರವೃತ್ತರಾದ ಉತ್ತರ ಪ್ರದೇಶದ ಪೊಲೀಸರು ತಾವೇ ಸ್ವಯಂ ಪ್ರೇರಿತರಾಗಿ ದೂರನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದರು.
ಈ ಸಮಯದಲ್ಲಿ ಅತುಲ್ ಅಗರ್‌ವಾಲ್ ತಮ್ಮ ಮಹಿಳಾ ಸ್ನೇಹಿತೆಯ ಜೊತೆ ಹೋಟೆಲ್‌ನಲ್ಲಿ ‘ಕಾಲಹರಣ’ ಮಾಡುತ್ತಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಅಮರ್ ಉಜಾಲಾ ಪತ್ರಿಕೆಯಲ್ಲಿ ಈ ಕುರಿತು ವರದಿ ಕೂಡ ಪ್ರಕಟವಾಗಿತ್ತು. ಹೀಗೆ ಅತುಲ್ ಅಗರ್‌ವಾಲ್ ಸುಳ್ಳು ಕಥೆ ಹೆಣೆದಿದ್ದ ವಿಚಾರ ಬಯಲಾಗುತ್ತಿದ್ದಂತೆಯೇ ಅತುಲ್ ಅಗರ್‌ವಾಲ್ ಮಹಿಳೆಯ ಜೊತೆ ಓಯೋ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು, ಇದೇ ಸಮಯದಲ್ಲಿ ಚಿತ್ರಾ ತ್ರಿಪಾಠಿ ಕರೆ ಮಾಡಿದ್ದ ಹಿನ್ನೆಲೆ ಅತುಲ್ ಅಗರ್‌ವಾಲ್ ಪತ್ನಿಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದ್ದಾರೆ ಎನ್ನುವ ವಿಚಾರ ಕೂಡ ಬಯಲಾಗಿತ್ತು.
ಈ ವಿಚಾರವನ್ನು ಆ ನಂತರ ಅಲ್ಲಗೆಳೆದಿದ್ದ ಅತುಲ್ ಅಗರ್‌ವಾಲ್ ತಾವು ಹೋಟೆಲ್‌ನಲ್ಲಿದ್ದ ವಿಚಾರ ಒಪ್ಪಿಕೊಂಡಿದ್ದರು. ಆದರೆ, ತನ್ನ ಜೊತೆ ಯಾರು ಇರಲಿಲ್ಲ, ತಾವೊಬ್ಬರೇ ಹೋಟೆಲ್‌ನಲ್ಲಿದ್ದಿದ್ದಾಗಿ ಹೇಳಿದ್ದರು. ಇಲ್ಲಿಂದನೇ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಅದು ಈಗ ವಿಚ್ಛೇದನದ ಹಂತಕ್ಕೆ ತಲುಪಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಚಿತ್ರಾ 16 ವರ್ಷಗಳನ್ನು ಜೊತೆಯಲ್ಲಿ ಕಳೆದ ನಂತರ ನಾವು ಸಂಬಂಧ ಕಡಿದುಕೊಳ್ಳುವ ಯೋಚನೆಯನ್ನು ಮಾಡಿದ್ದೇವೆ, ದಾಂಪತ್ಯ ಜೀವನ ಅಂತ್ಯಗೊಳಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ನಮ್ಮ ಮಗನನ್ನು ಬೆಳೆಸಲು ಪೋಷಕರಾಗಿ ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ ಎಂದಿರುವ ಚಿತ್ರಾ ಈ ಸಮಯದಲ್ಲಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಇದು ಅಂತ್ಯವಲ್ಲ ಆರಂಭ ನಿಮ್ಮೆಲ್ಲರ ಹಾರೈಕೆ ನಮಗಿರಲಿ ಎಂದು ಬರೆದುಕೊಂಡಿದ್ದಾರೆ.
