Bangalore: ಅಧಿಕೃತ ದಾಖಲೆಗಳಿಲ್ಲದಿದ್ದರೂ ಭಾರೀ ಪ್ರಮಾಣದ ನಗದು ಹೊಂದಿದ್ದರೆ ಅದು ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 98ರ ಪ್ರಕಾರ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಚಳ್ಳಕರೆ ಚೆಕ್‌ಪೋಸ್ಟ್‌ನಲ್ಲಿ 8.38 ಲಕ್ಷ ರೂ ನಗದು ಪತ್ತೆಯಾದ ಸಂಬಂಧ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಆಂಧ್ರ ಮೂಲದ ಆರ್.ಅಮರನಾಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕ ಸದಸ್ಯಪೀಠ ಈ ವಿಶೇಷ ಆದೇಶ ನೀಡಿದೆ.
ಕಳ್ಳತನ ಇಲ್ಲವೇ ಮೋಸದಿಂದ ಪಡೆದುಕೊಂಡಿರುವುದು ಸಾಬೀತಾಗದಿದ್ದಲ್ಲಿ ಈ ನಗದನ್ನೂ ಹೊಂದುವುದು ಅಪರಾಧ ಎನ್ನಲಾಗುವುದಿಲ್ಲ. ಕಳವು ಮಾಡಿರುವುದು ಇಲ್ಲವೇ ವಂಚನೆ ಎಸಗುವ ಮೂಲಕ ಗಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸಿದರೆ ಮಾತ್ರ ಅದು ಶಿಕ್ಷಾರ್ಹ ಅಪರಾಧವಾಗಿದೆ. 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 155(2) ರ ನಿಬಂಧನೆಗಳ ಪ್ರಕಾರ, ಪೊಲೀಸರು ನಾನ್-ಕಾಗ್ನಿಜೇಬಲ್ ಅಪರಾಧವನ್ನು ತನಿಖೆ ಮಾಡಲು ಪ್ರಯತ್ನಿಸಿದಾಗ, ಯಾವುದೇ ತನಿಖೆಯನ್ನು ಆರಂಭಿಸುವ ಮೊದಲು ಮ್ಯಾಜಿಸ್ಪ್ರೇಟ್ ಅವರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಪೂರ್ವಾನುಮತಿ ಪಡೆದಿಲ್ಲ ಎಂದು ಪೀಠ ತಿಳಿಸಿದೆ.
ಅಕ್ರಮ ಹಣ ಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ಚಳ್ಳಕೆರೆ ಪೊಲೀಸರು ದಾಖಲಿಸಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾ ಪ್ರಕ್ರಿಯೆ ರದ್ದುಮಾಡಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
