Home » ಕಂಬಳ ಅಬಾಧಿತ: ಕರಾವಳಿ ಬಿಟ್ಟು ಬೇರೆಡೆ ಬೇಡ ಎಂದಿದ್ದ ಪೆಟಾ, ನಿರ್ಬಂಧಕ್ಕೆ ಹೈಕೋರ್ಟ್ ನಕಾರ

ಕಂಬಳ ಅಬಾಧಿತ: ಕರಾವಳಿ ಬಿಟ್ಟು ಬೇರೆಡೆ ಬೇಡ ಎಂದಿದ್ದ ಪೆಟಾ, ನಿರ್ಬಂಧಕ್ಕೆ ಹೈಕೋರ್ಟ್ ನಕಾರ

0 comments
Kambala

ಬೆಂಗಳೂರು: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತು ಪಡಿಸಿ ರಾಜ್ಯದ ಬೇರೆ ಸ್ಥಳಗಳಲ್ಲಿ ಕಂಬಳ ಆಯೋಜಿಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಲು ಹೈಕೋರ್ಟ್ ನಿರಾಕರಿಸಿದೆ. ಕಂಬಳ.ಅಬಾಧಿತವಾಗಿ ಮುಂದುವರೆಯಲಿದೆ.

ಕರಾವಳಿ ಜಿಲ್ಲೆಗಳಾದ ದ.ಕ. ಮತ್ತು ಉಡುಪಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಬೇರೆ ಭಾಗಗಳಲ್ಲಿ ಕಂಬಳ ಆಯೋಜನೆ ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ಜತೆಗೆ ಪಿಲಿಕುಳ ಜೈವಿಕ ನಿಸರ್ಗ ಧಾಮ ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ ಪೇಟಾ (ಪೀಪಲ್ ಫಾರ್‌ಎಥಿಕಲ್ ಟ್ರೇಟೆಂಟ್ ಆಫ್ ಅನಿಮಲ್) 2024ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ ಇದೀಗ ತೀರ್ಪು ನೀಡಿದೆ.

ಸಾಂಪ್ರದಾಯಿಕ ಕ್ರೀಡೆಗಳು ವಹಿಸುವ ಮಹತ್ವದ ಪಾತ್ರವನ್ನು ಪರಿಗಣಿಸಿ ರಾಜ್ಯದಲ್ಲಿ ಕಂಬಳ ಅಥವಾ ಎತ್ತಿನಗಾಡಿ ಓಟದ ಸ್ಪರ್ಧೆಗೆ ವಿನಾಯಿತಿ ನೀಡುವುದು ಸೂಕ್ತವೆಂದು ಪರಿಗಣಿಸಿ ಪ್ರಾಣಿಗಳ ಮೇಲಿನ ಹಿಂಸೆ ತಡೆ ಕಾಯ್ದೆಗೆ ಎರಡನೇ ತಿದ್ದುಪಡಿ ತರಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಜನರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಕ್ರೀಡೆಯಾದ ‘ಕಂಬಳ’, ‘ಎತ್ತುಗಳ ಓಟ’, ‘ಎತ್ತಿನ ಬಂಡಿ ಓಟ’ ವಹಿಸಿದ ಮಹತ್ವದ ಪಾತ್ರವನ್ನು ಪರಿಗಣಿಸಿ ಹಾಗೂ ಸ್ಥಳೀಯ ತಳಿಗಳ ಜಾನುವಾರುಗಳ ಉಳಿವು ಮತ್ತು ಸಂರಕ್ಷಣೆ ಖಚಿತಪಡಿಸಿಕೊಳ್ಳುವಲ್ಲಿ ಕರ್ನಾಟಕ ಸರಕಾರವು ರಾಜ್ಯದಲ್ಲಿ ಕಂಬಳ ಅಥವಾ ಎತ್ತುಗಳ ಓಟ ಅಥವಾ ಎತ್ತಿನ ಬಂಡಿ ಓಟ ಆಯೋಜನೆಗೆ ವಿನಾಯಿತಿ ನೀಡಲು ನಿರ್ಧರಿಸಿದೆ. ಹಾಗಾಗಿ ದ.ಕ. ಮತ್ತು ಉಡುಪಿ ಜಿಲ್ಲೆಗಳ ಹೊರಗಿನ ಯಾವುದೇ ಸ್ಥಳದಲ್ಲಿ ಕಂಬಳ ಕ್ರೀಡೆ ಆಯೋಜಿಸದಂತೆ ಸರಕಾರವನ್ನು ನಿರ್ಬಂಧಿಸಬೇಕೆಂಬ ಪೆಟಾದ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

You may also like