Big Boss: ಬಿಗ್ಬಾಸ್ ಕಾರ್ಯಕ್ರಮ ಆರಂಭವಾಗಿ ಕೇವಲ ಒಂದು ವಾರವಷ್ಟೇ ಆಗಿದೆ. ಮನೆಯೊಳಗಿನ ಆಟ, ತುಂಟಾಟ, ಜಗಳ, ಹುಸಿ ಮುನಿಸು, ಟಾಸ್ಕ್ ಎಲ್ಲಾ ಈಗ ತಾನೇ ಶುರುವಾಗಿತ್ತು. ಅಲ್ಲದೆ ಬಿಗ್ ಬಾಸ್ ಶೂ ಅಂದ್ರೆ ಸುಮ್ಮನೆ ಅಲ್ಲ. ಇದರ ಖರ್ಚು ವೆಚ್ಚಗಳು ಕೋಟಿಗಟ್ಟಲೆಯಲ್ಲಿ ಇರುತ್ತದೆ.
ಈ ಕಾರ್ಯಕ್ರಮಕ್ಕಾಗಿ ತುಂಬಾ ದೊಡ್ಡ ಮೊತ್ತದಲ್ಲಿ ಖರ್ಚು ಮಾಡಲಾಗುತ್ತದೆ. ಆದರೀಗ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಗ್ ಬಾಸ್ ಮನೆಗೆ ಬೀಗ ಜಡಿದಿದೆ. ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರಿಗೆ ಬಿಗ್ ಶಾಕ್ ಕೊಟ್ಟಿದೆ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ಕನ್ನಡ ಬಿಗ್‌ಬಾಸ್ ಸೀಸನ್ 12 ಶೋ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಮಂಗಳವಾರ ಸಂಜೆ 7:30ರ ಒಳಗೆ ಬಿಗ್‌ಬಾಸ್ ಮನೆ ಖಾಲಿ ಮಾಡಲು ಸೂಚನೆ ನೀಡಲಾಗಿದೆ.
ಬಿಗ್‌ಬಾಸ್ ಮನೆಯನ್ನು ಕೆಡವಿ ಪುನರ್ ನಿರ್ಮಿಸಲು ಸುಮಾರು ₹3.5 ಕೋಟಿ ಖರ್ಚಾಗುತ್ತದೆ. ಮನೆ ಕಟ್ಟಲು ಸುಮಾರು 500ರಿಂದ 600 ಕಾರ್ಮಿಕರು 6 ತಿಂಗಳ ಕಾಲ ಕೆಲಸ ಮಾಡುತ್ತಾರೆ. ಬಿಗ್‌ಬಾಸ್ ಶೋನ ಒಟ್ಟು ಖರ್ಚು ಪ್ರತಿ ಸೀಸನ್‌ಗೆ ಸುಮಾರು ₹10 ಕೋಟಿ ಎಂದು ವರದಿ ಹೇಳಿದೆ.
ಇದರಲ್ಲಿ ಮನೆ ನಿರ್ಮಾಣ, ಲೇಔಟ್, ವಿನ್ಯಾಸ, ಪ್ರಮುಖ ತಂತ್ರಜ್ಞಾನ, ಭದ್ರತೆ, ಸಿಬ್ಬಂದಿ ಮತ್ತು ನಿರೂಪಕರ ಸಂಭಾವನೆ ಸೇರಿರುತ್ತದೆ. ಕನ್ನಡದಲ್ಲಿ ಕಳೆದ 12 ವರ್ಷಗಳಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಣೆ ಮಾಡಿಕೊಂಡು ಬರುತ್ತಿರುವವರು ನಟ ಕಿಚ್ಚ ಸುದೀಪ್. ಕೇವಲ ಅವರ ಸಂಭಾವನೆಯೇ ₹1 ಕೋಟಿಯ ಆಸುಪಾಸು ಇದೆ ಎಂದು ಹೇಳಲಾಗುತ್ತಿದೆ.
