Nadoja: ರಾಜ್ಯದ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿ ಹಬ್ಬದಲ್ಲಿ( ಘಟಿಕೋತ್ಸವ) ಮೂವರು ಸಾಧಕರಿಗೆ ನಾಡೋಜ ಪ್ರಶಸ್ತಿಯನ್ನು ರಾಜ್ಯಪಾಲರು ಪ್ರದಾನ ಮಾಡಿದ್ದಾರೆ.
ಹೌದು, ನಾಡಿನ ಏಕೈಕ ಸಂಶೋಧನಾ ವಿಶ್ವವಿದ್ಯಾಲಯ ಎನಿಸಿರುವ ಪ್ರತಿಷ್ಠಿತ ಹಂಪಿ ಕನ್ನಡ ವಿಶ್ವವಿದ್ಯಾಲಯ 33ನೇ ನುಡಿ ಹಬ್ಬವು ಇಂದು (ಏಪ್ರಿಲ್ 4) ನಡೆದಿದೆ. ಈ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತರಾದ ನ್ಯಾ. ಶಿವರಾಜ್ ವಿ. ಪಾಟೀಲ್, ಬರಹಗಾರ ಮತ್ತು ಚಿಂತಕರಾದ ಕುಂ. ವೀರಭದ್ರಪ್ಪ, ಧಾರವಾಡದ ಹಿಂದೂಸ್ತಾನಿ ಗಾಯಕ ಪದ್ಮಶ್ರಿ ಎಂ. ವೆಂಕಟೇಶ್ ಕುಮಾರ್ ಅವರಿಗೆ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಯಾದ ‘ನಾಡೋಜ’ ವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾಕ್ಟರ್ ಎಂ ಸಿ ಸುಧಾಕರ್ ಅವರು ವಿಶ್ವವಿದ್ಯಾಲಯದಲ್ಲಿ ಪಿಹೆಚ್. ಡಿ ಅಧ್ಯಯನವನ್ನು ಕೈಗೊಂಡ 190 ಸಂಶೋಧನಾರ್ಥಿಗಳಿಗೆ ಪಿಎಚ್ ಡಿ ಪದವಿಯನ್ನು ಕೂಡ ಪ್ರದಾನ ಮಾಡಿದ್ದಾರೆ. ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ ಬಿ ಪರಮಶಿವಮೂರ್ತಿ, ಕುಲ ಸಚಿವರಾದ ವಿಜಯ ಪೂಣಚ್ಚ ತಂಬಂಡ ಹಾಗೂ ವಿವಿಧ ನಿಕಾಯದ ಡೀನರು ಮತ್ತು ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು
