Karnataka Bank: ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ನಿಗದಿತ ಖಾತೆಗೆ ಹೋಗಬೇಕಿದ್ದ ಒಂದು ಲಕ್ಷ ಕೋಟಿ ರೂಪಾಯಿ ಬೇರೊಂದು ಖಾತೆಗೆ ಟ್ರಾನ್ಸ್ಫರ್ ಆದ ಘಟನೆ ನಡೆದಿದೆ.
ಹೌದು, ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಅಚಾತುರ್ಯದಿಂದ ಬೇರೊಂದು ಖಾತೆಗೆ ವರ್ಗಾವಣೆ ಮಾಡಲಾಗಿದೆ. ಆಗಸ್ಟ್ 8, 2023ರಂದು ನಡೆದ ಈ ಘಟನೆಯನ್ನು ಆರ್‌ಬಿಐ (RBI) ತನ್ನ ವಾರ್ಷಿಕ ಪರಿಶೀಲನೆಯಲ್ಲಿ ಕೈಗೆತ್ತಿಕೊಂಡಿದೆ. ಸಿಬ್ಬಂದಿಯ ಕಣ್ತಪ್ಪಿನಿಂದಾದ ಈ ಘಟನೆಯಿಂದ ಕರ್ನಾಟಕ ಬ್ಯಾಂಕ್ ನಲ್ಲಿರುವ ಠೇವಣಿ ಎಲ್ಲ ಖಾಲಿಯಾಗಿದೆ.
ಅಂದಹಾಗೆ ಈ ಘಟನೆ ಆಗಸ್ಟ್ 8, 2023ರಂದು ಸಂಜೆ 5:01ಕ್ಕೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್, ಹಣವನ್ನು ನಿಷ್ಕ್ರಿಯ ಖಾತೆಗೆ ವರ್ಗಾಯಿಸಲಾಯಿತು. ಇದು ಯಾವುದೇ ರೀತಿಯಲ್ಲಿ ದುರುಪಯೋಗವನ್ನು ತಡೆಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ಕರ್ನಾಟಕ ಬ್ಯಾಂಕಿನ ಕಾರ್ಯಾಚರಣೆ ತಂಡವು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಸುಮಾರು ಮೂರು ಗಂಟೆಗಳ ಪ್ರಯತ್ನದ ನಂತರ, ಅದೇ ಸಂಜೆ ರಾತ್ರಿ 8:09ರ ಹೊತ್ತಿಗೆ ಸಂಪೂರ್ಣ ಮೊತ್ತವನ್ನು ಯಶಸ್ವಿಯಾಗಿ ಹಿಂಪಡೆಯಲಾಯಿತು.
