ರಾಜ್ಯದಲ್ಲಿ 2023-24 ನೇ ಸಾಲಿನಲ್ಲಿ ಪ್ರಮುಖ ಖಾಸಗಿ ಶಾಲೆಗಳಲ್ಲಿ ಪ್ರವೇಶ ಶುಲ್ಕ ಹೆಚ್ಚಳವಾಗಲಿದ್ದು, ಪ್ರವೇಶ ಶುಲ್ಕವನ್ನು ಶೇಕಡಾ 5 ರಿಂದ ಶೇಕಡಾ 15ರ ವರೆಗೆ ಹೆಚ್ಚಿಸಲು ವಿವಿಧ ಖಾಸಗಿ ಶಾಲಾ ಸಂಘಟನೆಗಳು ನಿರ್ಧರಿಸಿವೆ. ಹಾಗಾಗಿ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪೋಷಕರು ಇನ್ನಷ್ಟು ದುಬಾರಿ ಶುಲ್ಕ ತೆರಬೇಕಾಗುತ್ತದೆ. ಇದಂತು ಪೋಷಕರಿಗೆ ಬಿಗ್ ಶಾಕ್ ಆಗಿದೆ.
ಸುಮಾರು ನಾಲ್ಕು ಸಾವಿರ ಸದಸ್ಯ ಶಾಲೆಗಳನ್ನು ಹೊಂದಿರುವ ಕರ್ನಾಟಕ ಖಾಸಗಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಶಾಲಾ ಪ್ರವೇಶ ಶುಲ್ಕ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದು, ಶೇಕಡ 5 ರಿಂದ ಶೇಕಡ 15ರ ವರೆಗೆ ಪ್ರವೇಶ ಶುಲ್ಕ ಹೆಚ್ಚಿಸಲು ತನ್ನ ಸದಸ್ಯ ಶಾಲೆಗಳಿಗೆ ಸಲಹೆ ನೀಡಿದೆ. ಪ್ರತಿ ವರ್ಷ ಹೆಚ್ಚಾಗುವ ಶಾಲಾ ನಿರ್ವಹಣಾ ವೆಚ್ಚ, ಕೆಲವೊಂದು ಹೊಸ ಸೌಲಭ್ಯಗಳು ಇವೆಲ್ಲವನ್ನು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಶಾಲಾ ಪ್ರವೇಶ ಶುಲ್ಕವನ್ನು ಹೆಚ್ಚಿಸಲು ಸಲಹೆ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಶುಲ್ಕ ಹೆಚ್ಚಳ, ಇಳಿಕೆ ಇವೆಲ್ಲಾ ಆಯಾ ಶಾಲಾ ಆಡಳಿತ ಮಂಡಳಿಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಆದರೆ ಪೋಷಕರಿಗೆ ಹೊರೆಯಾಗುವಷ್ಟು ಶೇಕಡ 20 ಶೇಕಡ 30 ರಷ್ಟು ಶುಲ್ಕ ಹೆಚ್ಚಿಸುವುದು ಸರಿಯಲ್ಲ ಎಂದು ಹೇಳಿದರು.
ಇನ್ನೊಂದು ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಕೂಡ ಶಾಲಾ ಪ್ರವೇಶ ಶುಲ್ಕವನ್ನು ಶೇಕಡ 5 ರಿಂದ ಶೇಕಡ 10 ರಷ್ಟು ಹೆಚ್ಚಿಸಿದ್ದು, ಈ ಬಗ್ಗೆ ಸದಸ್ಯ ಶಾಲೆಗಳಿಗೆ ತಿಳಿಸಲಾಗಿದೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
ಕುಸ್ಮಾ ಖಾಸಗಿ ಶಾಲಾ ಸಂಘಟನೆಯು ಶುಲ್ಕ ಹೆಚ್ಚಳ ನಿರ್ಧಾರ ಸದಸ್ಯ ಶಾಲೆಗಳ ತೀರ್ಮಾನಕ್ಕೆ ಬಿಟ್ಟದ್ದು, ಅಲ್ಲದೆ, ಒಂದು ಸಂಘಟನೆಯಾಗಿ ನಾವು ಸದಸ್ಯ ಶಾಲೆಗಳಿಗೆ ಇಂತಿಷ್ಟೇ ಶುಲ್ಕ ಹೆಚ್ಚಿಸಿ ಎಂದು ಹೇಳಲಾಗುವುದಿಲ್ಲ. ಹಾಗೆ ಬೇಕಾಬಿಟ್ಟಿ ಹೆಚ್ಚಿಸಲೂ ಆಗುವುದಿಲ್ಲ. ಶಾಲಾ ಸೌಲಭ್ಯ, ಪೋಷಕರ ಸಾಮರ್ಥ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಶುಲ್ಕ ಹೆಚ್ಚಿಸುವ ವಿಚಾರವನ್ನು ಶಾಲೆಗಳಿಗೆ ಬಿಡಲಾಗಿದೆ ಎಂದು ಕುಸ್ಮಾ ಅಧ್ಯಕ್ಷರಾದ ಸತ್ಯಮೂರ್ತಿ ಹೇಳಿದ್ದಾರೆ.
