Mangalore: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಹಲವು ಕಡೆ ಮರಗಳು ಉರುಳಿ ಬಿದ್ದಿದೆ. ಇದೇ ಸಂದರ್ಭದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಧರ್ಮಸ್ಥಳ ಭಾಗದಲ್ಲಿ ನೀರು ತುಂಬಿ ಹರಿಯುತ್ತಿದೆ. ಕಿಂಡಿ ಅಣೆಕಟ್ಟೆಗಳಲ್ಲಿ ನೀರು ತುಂಬಿದ್ದು, ಹಲಗೆಗಳನ್ನು ಎತ್ತಲಾಗಿದೆ.
ಇನ್ನೊಂದು ಕಡೆ ಹವಾಮಾನ ಇಲಾಖೆ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ. ರಾಜ್ಯಕ್ಕೆ ಶನಿವಾರ (ಮೇ 24) ರಂದು ವಾಡಿಕೆಗಿಂತ ಮೊದಲೇ ಮುಂಗಾರು ಪ್ರವೇಶ ಆಗಿದೆ. ಜೂನ್ 1 ರಂದು ಮುಂಗಾರು ಆರಂಭವಾಗುವುದು ಸಾಮಾನ್ಯ. ಆದರೆ ಈ ಬಾರಿ ಎಂಟು ದಿನ ಮೊದಲೇ ಕೇರಳದ ಮೂಲಕ ಪ್ರವೇಶ ಮಾಡಿದೆ. ಇದೊಂದು ಅಪರೂಪದ ಪ್ರಕ್ರಿಯೆ ಎನ್ನಬಹುದು. 2009 ರಲ್ಲಿ ಜುಲೈ 23 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿತ್ತು. ಕಳೆದ ಬಾರಿ ಮೇ 30 ರಂದು, 2023 ರಲ್ಲಿ ಜೂ.8 ಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.
ಕೊಡಗಿನಲ್ಲಿ ಕೂಡಾ ಭಾರೀ ಮಳೆಯಾಗಿದ್ದು, ಭಾಗಮಂಡಲ, ತಲಕಾವೇರಿ ಕಡೆ ಮಳೆ ಪ್ರಮಾಣ ಹೆಚ್ಚಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿದೆ. ಭಾಗಮಂಡಲ, ನಾಪೋಕ್ಲು ಹೋಬಳಿಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಕಕ್ಕಬೆ, ನಾಪೋಕ್ಲು, ನೆಲಜಿ, ಕಕ್ಕಬ್ಬೆ, ಬಲ್ಲಮಾವಟಿ ಕಡೆ ಮರಳು ಉರುಳಿದ ವರದಿಯಾಗಿದೆ. ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ಕಡೆ ಕೂಡಾ ಭಾರೀ ಮಳೆಯಾಗಿರುವ ವರದಿಯಾಗಿದೆ.
