Kasaragodu: ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ್ ಬೀಚ್ ಉತ್ಸವದಲ್ಲಿ ಮಲಯಾಳಂ ರ‍್ಯಾಪರ್ ವೇದನ್ ಅವರ ಸಂಗೀತ ಕಚೇರಿಯ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು, ಮಕ್ಕಳು ಸೇರಿದಂತೆ ಹಲವು ಗಾಯಗೊಂಡಿದ್ದಾರೆ. ಇದೇ ವೇಳೆ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನಪ್ಪಿದ್ದಾನೆ ಎಂದು ವರದಿಯಾಗಿದೆ.
ಪೊಯಿನಾಚಿಯ ಶಿವಾನಂದ (19) ಮೃತಪಟ್ಟವರು. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮಕ್ಕಳು , ಹಿರಿಯರು ಸೇರಿದಂತೆ ಹಲವು ಮಂದಿ ಕುಸಿದು ಬಿದ್ದ ಘಟನೆಯೂ ನಡೆದಿದೆ. ಘಟನೆ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಈ ಕಾರ್ಯಕ್ರಮವನ್ನು ಬೇಕಲ್ ಪಾರ್ಕ್ ಪಕ್ಕದ ಸ್ಥಳದಲ್ಲಿ ಆಯೋಜಿಸಲಾಗಿತ್ತು. ವೇದನ್ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ಬಹಳ ತಡವಾಗಿ ಆಗಮಿಸಿದ್ದರು ಎನ್ನಲಾಗಿದೆ, ಆ ಹೊತ್ತಿಗೆ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಈ ಕಾರ್ಯಕ್ರಮದಲ್ಲಿ 25,000 ಕ್ಕೂ ಹೆಚ್ಚು ಜನ ಸೇರಿದ್ದರು ಎಂದು ಹೇಳಲಾಗಿದೆ. ಭಾರೀ ಸಂಖ್ಯೆಯ ಪ್ರೇಕ್ಷಕರು ತಲುಪಿದ್ದರಿಂದ ಜನಸಂದಣಿಯು ಪಾರ್ಕ್ ಸಮೀಪದ ರೈಲ್ವೆ ಹಳಿ ತನಕ ತಲುಪಿತ್ತು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಹಲವು ಮಂದಿ ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಈ ಸಂದರ್ಭದಲ್ಲಿ ರೈಲು ಬಡಿದು ಶಿವಾನಂದ ಮೃತಪಟ್ಟಿದ್ದಾರೆ. ಶಿವಾನಂದ ಅವರ ಜೊತೆಗಿದ್ದ ಇನ್ನೋರ್ವನಿಗೂ ರೈಲು ಬಡಿದಿದೆ ಎನ್ನಲಾಗಿದೆ.
