ಕಾಶ್ಮೀರದಲ್ಲಿ ದೇಶವಿರೋಧಿ ಘಟನೆಯೊಂದು ನಡೆದಿದ್ದು, ಕಾಶ್ಮೀರ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿಯವರ ಮೃತದೇಹಕ್ಕೆ ಪಾಕಿಸ್ತಾನ ಧ್ವಜ ಹೊದಿಸಿ, ದೇಶ ವಿರೋಧಿ ಘೋಷಣೆ ಕೂಗಿದ ಗೀಲಾನಿಯವರ ಕುಟುಂಬದವರ ವಿರುದ್ಧ ಬದ್ಗಾಂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಅಲಿ ಗೀಲಾನಿಯವರು ಬುಧವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತ ದೇಹವನ್ನು ಸಮೀಪದಲ್ಲಿರುವ ಮಸೀದಿಯ ಸ್ಮಶಾನದಲ್ಲಿ ಹೂಳುವ ಮುನ್ನ ಪಾಕಿಸ್ತಾನ ರಾಷ್ಟ್ರ ಧ್ವಜವನ್ನು ಹೊದಿಸಲಾಗಿತ್ತು.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾಶ್ಮೀರದಲ್ಲಿ ಶುಕ್ರವಾರ ರಾತ್ರಿ ಮೊಬೈಲ್ ಇಂಟರ್‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಈ ನಡುವೆ ಪುತ್ರ ನಸೀಮ್ ಗಿಲಾನಿ ನಮ್ಮ ತಂದೆಯ ಮೃತ ದೇಹವನ್ನು ಪೊಲೀಸರು ಬಲವಂತವಾಗಿ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೇ ಮನೆಯ ಮಹಿಳೆಯರಿಗೆ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಪೊಲೀಸರು ಸೈಯದ್ ಅಲಿ ಶಾ ಗೀಲಾನಿಯವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರಿಗೆ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಶ್ರೀನಗರದ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಹೈದರ್‍ಪೋರಾದಲ್ಲಿ ಗೀಲಾನಿಯವರನ್ನು ಸಮಾಧಿ ಮಾಡಿಲಾಗಿದೆ. ಅಲ್ಲದೇ ಅಂತ್ಯಕ್ರಿಯೆಯಲ್ಲಿ ಗೀಲಾನಿಯವರ ಕೆಲ ಸಂಬಂಧಿಕರು ಕೂಡ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
