ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆಯು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದರೆ ದೈವಿಕ ಸ್ವರೂಪಿ ಪೂಜೆಯ ಕೊಠಡಿಗೆ ವಾಸ್ತು ಬಹಳ ಮುಖ್ಯವಾಗುತ್ತದೆ. ಮುಖ್ಯವಾಗಿ ದೇವರ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ತುಂಬಾ ಮಂಗಳಕರವಾಗಿದೆ. ಇದು ವ್ಯಕ್ತಿಯ ಅದೃಷ್ಟವನ್ನು ಜಾಗೃತಗೊಳಿಸುತ್ತದೆ ಎಂಬ ನಂಬಿಕೆ ಇದೆ.
ಅದಲ್ಲದೆ ವಾಸ್ತು ನಿಯಮಗಳ ಪ್ರಕಾರ, ಅಶುಭವೆಂದು ಪರಿಗಣಿಸಲಾದ ಕೆಲವು ವಸ್ತುಗಳನ್ನು ಮನೆಯ ದೇವರ ಕೋಣೆಯೊಳಗೆ ಇಡಬಾರದು. ಇದರಿಂದ ಮನಸ್ಸು ಚಂಚಲತೆಯ ಜೊತೆಗೆ, ಧನಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲು ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿಯ ಆಶೀರ್ವಾದದ, ಕುಬೇರನ ಕೃಪೆಯ ಜೊತೆಗೆ ಅದೃಷ್ಟದ ಬೆಂಬಲ ದೊರೆಯಲು ಮನೆಯ ದೇವರ ಕೋಣೆಯಲ್ಲಿ ಇಡುವ ಒಂದು ಪವಿತ್ರ ವಸ್ತು ಇಲ್ಲಿ ತಿಳಿಸಲಾಗಿದೆ.
ವಾಸ್ತವವಾಗಿ ಧರ್ಮ ಗ್ರಂಥಗಳಲ್ಲಿ ಶಂಖವನ್ನು ಪವಿತ್ರವಾದ ವಸ್ತು ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ ಯಾವುದೇ ಪೂಜೆ, ಧಾರ್ಮಿಕ ಆಚರಣೆಗಳಲ್ಲಿ ಶಂಖವನ್ನು ಊದಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಯಲ್ಲಿ ಶಂಖವನ್ನು ಊದುವುದರಿಂದ ದುಷ್ಟ ಶಕ್ತಿಗಳು ಮನೆಯಿಂದ ಹೊರಹೋಗುತ್ತವೆ. ಮಾತ್ರವಲ್ಲ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶವಾಗುತ್ತದೆ ಎಂಬ ನಂಬಿಕೆ ಇದೆ.
ವಾಸ್ತು ಶಾಸ್ತ್ರದ ಪ್ರಕಾರ, ಶಂಖದ ಕೆಲವು ಪರಿಹಾರಗಳು ಅದೃಷ್ಟದ ಜೊತೆಗೆ ಲಕ್ಷ್ಮೀ ಆಶೀರ್ವಾದವನ್ನು ಗಳಿಸಬಹುದಾಗಿದೆ.
- ಯಾವ ಮನೆಯಲ್ಲಿ ಪೂಜೆಯ ಸಮಯದಲ್ಲಿ ಶಂಖನಾದ ಕೇಳಿ ಬರುತ್ತದೋ ಅಂತಹ ಕುಟುಂಬದ ಮೇಲೆ ಲಕ್ಷ್ಮಿ ಮತ್ತು ಕುಬೇರನ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಲಾಗುತ್ತದ.
- ವಾಸ್ತು ಪ್ರಕಾರ, ಸಾಲ, ಆರ್ಥಿಕ ಸಂಕಷ್ಟ ಮುಂತಾದ ಆರ್ಥಿಕ ಮುಗ್ಗಟ್ಟಿನಿಂದ ಪರಿಹಾರ ಪಡೆಯಲು ನಿಯಮಾನುಸಾರ ದೇವರ ಕೋಣೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಸ್ಥಾಪಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದಕ್ಷಿಣಾವರ್ತಿ ಶಂಖ ಇರುವ ಮನೆಯಲ್ಲಿ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಮತ್ತು ಕುಬೇರ ಇಬ್ಬರೂ ಶಾಶ್ವತವಾಗಿ ನೆಲೆಸುತ್ತಾರೆ ಎಂಬ ನಂಬಿಕೆಯಿದೆ.
- ಶಂಖ ಇಡುವ ಸ್ಥಳದಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಶಂಖವನ್ನು ಸ್ಥಾಪಿಸಬೇಕು. ಇದರಿಂದ ನಿಮ್ಮ ಖಜಾನೆ ಸದಾ ತುಂಬಿರುತ್ತದೆ ಎನ್ನಲಾಗುವುದು.
- ಮನೆಯಲ್ಲಿ ವಾಸ್ತು ದೋಷ ನಿವಾರಣೆಗಾಗಿ ಶಂಖವನ್ನು ಊದಿದ ನಂತರ ಅದನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದರ ನಂತರ, ಇಡೀ ಮನೆಯಲ್ಲಿ ಪವಿತ್ರ ಜಲವನ್ನು ಸಿಂಪಡಿಸಬೇಕು. ಇದರಿಂದ ವಾಸ್ತು ದೋಷ ನಿವಾರಣೆ ಆಗುವ ಜೊತೆಗೆ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ.
ಇದಲ್ಲದೆ ಮುಖ್ಯವಾಗಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಮುರಿದ ಅಥವಾ ತುಂಡಾದ ದೇವರ ವಿಗ್ರಹ ಮತ್ತು ಫೋಟೋ ಇರಿಸಬಾರದು ಮತ್ತು ದೇವಿ ಅಥವಾ ದೇವರ ರೌದ್ರ ರೂಪ ಇರಿಸುವುದು ಸೂಕ್ತವಲ್ಲ. ಅದಲ್ಲದೆ ಒಂದಕ್ಕಿಂತ ಹೆಚ್ಚು ಶಂಖ ಇರಿಸಬೇಡಿ. ಇನ್ನು ಹರಿದ ಧಾರ್ಮಿಕ ಪುಸ್ತಕಗಳು ಕೆಡುಕು ಮಾಡುತ್ತವೆ. ಜೊತೆಗೆ ನಿರುಪಯುಕ್ತ ಪೂಜಾ ಸಾಮಾಗ್ರಿಗಳು ಇರಿಸಿಕೊಳ್ಳಬೇಡಿ. ಈ ರೀತಿಯಾಗಿ ನಿಮ್ಮ ಪೂಜಾ ಕೋಣೆಯನ್ನು ಶುಭ್ರವಾಗಿ ಇರಿಸುವುದರಿಂದ ಲಕ್ಷ್ಮೀ ತಾನಾಗಿಯೇ ಒಳಿಯುತ್ತಾಳೆ ಎಂಬ ನಂಬಿಕೆ ಇದೆ.
