Home » ಒಂದು ವರ್ಷದ ಬಳಿಕ ಸಿಕ್ಕಿತು ಕೇರಳದ ಭೀಕರ ವಿಮಾನ ದುರಂತಕ್ಕೆ ಕಾರಣ !! | ಪೈಲೆಟ್ ನ ಆ ಕೊನೆ ಕ್ಷಣದ ನಡೆಯೇ ದುರ್ಘಟನೆಗೆ ಕಾರಣವಾಯಿತೇ?

ಒಂದು ವರ್ಷದ ಬಳಿಕ ಸಿಕ್ಕಿತು ಕೇರಳದ ಭೀಕರ ವಿಮಾನ ದುರಂತಕ್ಕೆ ಕಾರಣ !! | ಪೈಲೆಟ್ ನ ಆ ಕೊನೆ ಕ್ಷಣದ ನಡೆಯೇ ದುರ್ಘಟನೆಗೆ ಕಾರಣವಾಯಿತೇ?

by ಹೊಸಕನ್ನಡ
0 comments

ಕಳೆದ ವರ್ಷ ಕೇರಳದಲ್ಲಿ ನಡೆದಿದ್ದ ಭೀಕರ ವಿಮಾನ ದುರಂತಕ್ಕೆ ಕೊನೆಗೂ ಕಾರಣ ದೊರಕಿದೆ. ಪೈಲಟ್ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಕೇರಳದ ಕೋಯಿಕ್ಕೋಡ್‍ನಲ್ಲಿ ವಿಮಾನ ದುರಂತ ಸಂಭವಿಸಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ಹೇಳಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ವಿಭಾಗವಾದ ಎಎಐಬಿ 257 ಪುಟಗಳ ವರದಿಯನ್ನು ಶನಿವಾರ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್ ಲ್ಯಾಂಡಿಂಗ್ ವೇಳೆ ಪಾಲಿಸಬೇಕಾದ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡಲಿಲ್ಲ ಎಂದು ಹೇಳಿದೆ.

ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಭಾರೀ ಮಳೆ ಬರುತ್ತಿತ್ತು. ಇದರಿಂದಾಗಿ ಪೈಲಟ್‍ಗೆ ರನ್‍ವೇ ಸರಿಯಾಗಿ ಗೋಚರಿಸಲಿಲ್ಲ. ಈ ವೇಳೆ ‘ಗೋ ಅರೌಂಡ್’ ಎಂಬ ಸಂದೇಶವನ್ನು ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ರೂಮಿಗೆ ಕಳುಹಿಸಿದ ಬಳಿಕವೂ ಪೈಲಟ್ ಟಚ್‍ಡೌನ್ ವಲಯವನ್ನು ದಾಟಿ ರನ್‍ವೇಯ ಅರ್ಧ ದೂರದಲ್ಲಿ ಲ್ಯಾಂಡ್ ಮಾಡಿದ್ದಾರೆ. ಇದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದೆ.

ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪೈಲಟ್‍ಗೆ ಅನಿಸಿದಾಗ ಗೋ ಅರೌಂಡ್ ಸಂದೇಶವನ್ನು ಕಳುಹಿಸುತ್ತಾರೆ. ಈ ಸಂದೇಶ ಬಂದ ಕೂಡಲೇ ವಿಮಾನ ಲ್ಯಾಂಡ್ ಮಾಡಲು ಪೈಲಟ್‍ಗೆ ಸಾಧ್ಯವಾಗುವುದಿಲ್ಲ ಎನ್ನುವುದು ಎಟಿಸಿಯಲ್ಲಿ ಕಾರ್ಯನಿರ್ವಹಣೆ ಮಾಡುವವರಿಗೆ ತಿಳಿಯುತ್ತದೆ. ಕೂಡಲೇ ಅವರು ಹತ್ತಿರದಲ್ಲೇ ಎಲ್ಲಿ ಲ್ಯಾಂಡಿಂಗ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ.

ವಿಮಾನದ ಗಾಜಿನ ವೈಪರ್ ದೋಷಪೂರಿತವಾಗಿತ್ತು. ಪ್ರತಿಕೂಲ ಹವಾಮಾನದಿಂದ ಲ್ಯಾಂಡಿಂಗ್ ಮಾಡುವುದು ಕಷ್ಟ ಎನ್ನುವುದು ಪೈಲಟ್‍ಗೆ ಗೊತ್ತಿತ್ತು. ಈ ವಿಚಾರಗಳು ಪೈಲಟ್‍ಗೆ ಮೊದಲೇ ಗೊತ್ತಿತ್ತು. ಆದರೂ ಪೈಲಟ್ ಟಚ್‍ಡೌನ್ ವಲಯ(ವಿಮಾನದ ಚಕ್ರಗಳು ಮೊದಲು ರನ್‍ವೇಯನ್ನು ಸ್ಪರ್ಶಿಸುವ ಸ್ಥಳ) ದಾಟಿ ಅರ್ಧ ದೂರದಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದಾಗಿ ವಿಮಾನ ನಿಯಂತ್ರಣಕ್ಕೆ ಸಿಗದೇ ಟೇಬಲ್ ಟಾಪ್ ರನ್‍ವೇಯಿಂದ ಕೆಳಗೆ ಜಾರಿ ಬಿದ್ದಿದೆ ಎಂದು ವರದಿ ತಿಳಿಸಿದೆ.

ದುಬೈಯಿಂದ ವಂದೇ ಭಾರತ್ ಮಿಷನ್ ಅಡಿ 2020ರ ಆಗಸ್ಟ್ 7ರಂದು 184 ಪ್ರಯಾಣಿಕರನ್ನು ಹೊತ್ತುಕೊಂಡು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೋಯಿಕ್ಕೊಂಡಿಗೆ ಬಂದಿತ್ತು. ಈ ವೇಳೆ ರನ್‍ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ವಿಮಾನ ಕೆಳಗೆ ಜಾರಿ ಬಿದ್ದ ಪರಿಣಾಮ ಇಬ್ಬರು ಪೈಲಟ್ ಸೇರಿದಂತೆ 21 ಮಂದಿ ಮೃತಪಟ್ಟಿದ್ದರು.

ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?

ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣ ಹೊರತು ಪಡಿಸಿ ದೇಶದಲ್ಲಿ ಕೋಯಿಕ್ಕೋಡ್‍ ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

You may also like

Leave a Comment