Kelara: ಕೇರಳದಲ್ಲಿ ಭಿಕ್ಷುಕರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನ ಸಾವಿನ ನಂತರ ಆತನ ಬಳಿ ಇದ್ದ ಪೆಟ್ಟಿಗೆಯನ್ನು ತೆರೆದ ಪೊಲೀಸರು ಹಾಗೂ ಅಧಿಕಾರಿಗಳಿಗೆ ಅದರೊಳಗಿರುವ ಭಾರಿ ಮೊತ್ತದ ಹಣ ನೋಡಿ ಶಾಕ್ ಆಗಿದ್ದಾರೆ.
ಹೌದು, ಕೇರಳದ ರಸ್ತೆ ಅಪಘಾತದ ನಂತರ ಸಾವನ್ನಪ್ಪಿದ ಭಿಕ್ಷುಕನೊಬ್ಬನ ಬಳಿ 4.5 ಲಕ್ಷ ರೂಪಾಯಿಗೂ ಹೆಚ್ಚು ಹಣ ಇದ್ದುದು ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಪೊಲೀಸರು ಆತನ ಬ್ಯಾಗ್ ಪರಿಶೀಲಿಸಿದ್ದಾರೆ. ಈ ವೇಳೆ ಅಲ್ಲಿದ್ದ ಭಾರೀ ಪ್ರಮಾಣದ ವಿದೇಶಿ ಕರೆನ್ಸಿಯನ್ನು ಕಂಡು ಆಲಪ್ಪುಳ ಠಾಣೆಯ ಪೊಲೀಸ್ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.
ಚಾರುಮ್ಮೂಟ್ ಹಾಗೂ ಆಲಪ್ಪುಳ ಸುತ್ತಮುತ್ತ ಪರಿಚಿತ ಮುಖವಾಗಿದ್ದ ಈ ವ್ಯಕ್ತಿ, ದಿನನಿತ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆತ ಯಾವುದೇ ವಿವರಗಳನ್ನು ಬಹಿರಂಗಪಡಿಸದೆ, ಆತ ಆಸ್ಪತ್ರೆಯಿಂದ ತಾನಾಗಿಯೇ ಹೊರನಡೆದಿದ್ದ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆತ ತನ್ನ ಹೆಸರನ್ನು ಅನಿಲ್ ಕಿಶೋರ್ ಎಂದು ತಿಳಿಸಿದ್ದಾನೆ.
ಮರುದಿನ ಬೆಳಿಗ್ಗೆ, ಅಂಗಡಿಯೊಂದರ ಎದುರು ಆತನ ಶವ ಪತ್ತೆಯಾಗಿದ್ದು, ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಶವದ ಬಳಿ ಕಂಡುಬಂದ ಪಾತ್ರೆಯನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು. ಸ್ಥಳೀಯ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ತೆರೆಯಲಾದ ಪಾತ್ರೆಯಲ್ಲಿ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಸಂಗ್ರಹಿಸಿದ್ದ ₹4.5 ಲಕ್ಷಕ್ಕಿಂತ ಹೆಚ್ಚು ನಗದು ಪತ್ತೆಯಾಗಿದೆ. ಇದರಲ್ಲಿ ನಿಷೇಧಿತ ₹2,000 ನೋಟುಗಳು ಹಾಗೂ ಕೆಲವು ವಿದೇಶಿ ಕರೆನ್ಸಿಯೂ ಸೇರಿವೆ.
ಅನಿಲ್ ಕಿಶೋರ್ ಪ್ರತಿದಿನ ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದ. ಆಹಾರಕ್ಕಾಗಿ ಎಲ್ಲರ ಬಳಿ ಹಣ ಕೇಳುತ್ತಿದ್ದ. ಊಟಕ್ಕೇ ಹಣವಿಲ್ಲವೆಂದು ಹೇಳುತ್ತಿದ್ದ ಆ ಭಿಕ್ಷುಕ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದಾನೆಂದು ಯಾರಿಗೂ ತಿಳಿದಿರಲಿಲ್ಲ. ಈ ವಿಷಯ ಕೇಳಿ ಸುತ್ತಲಿನ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
