Puttur: ಫೆ.22ರಂದು ನಡೆದ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ 11 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತದ ಸಹಕಾರ ಭಾರತಿ, 1 ರಲ್ಲಿ ಕಾಂಗ್ರೆಸ್ ಬೆಂಬಲಿತದ ರೈತಸ್ನೇಹಿ ಬಳಗದ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಆ ಮೂಲಕ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಸಹಕಾರ ಭಾರತಿಯು ಬಹುಮತದೊಂದಿಗೆ ಅಧಿಕಾರವನ್ನು ಪಡೆದುಕೊಂಡಿದೆ.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದ ತೀರ್ಥಾನಂದ ದುಗ್ಗಳ, ಜನಾರ್ಧನ ಗೌಡ ಪಿ, ರಾಜೇಶ್ ಗೌಡ ಕುದುಳಿ, ಸತೀಶ್ ಪಾಂಬಾರು, ಕಾಂಗ್ರೆಸ್ ಬೆಂಬಲಿತರಾಗಿದ್ದ ಪವನ್ ದೊಡ್ಡಮನೆ, ಮಹಿಳಾ ಸ್ಥಾನದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದ ಜಲಜಾಕ್ಷಿ ಮಾಧವ ಗೌಡ ಕುಂಟಿಕಾನ, ಸುನಂದ ಲೋಕನಾಥ ಗೌಡ ಬಾಯಂಬಾಡಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಪ್ರಭಾಕರ ರೈ ಕೊಂರ್ಬಡ್ಕ, ಹಿಂದುಳಿದ ವರ್ಗ ಎ ಸ್ಥಾನದಿಂದ ಪ್ರವೀಣ ಜಿ ಕೆ, ಪರಿಶಿಷ್ಟ ಪಂಗಡ ಸ್ಥಾನದಿಂದ ಅಣ್ಣಪ್ಪ ನಾಯ್ಕ ಬಿ, ಪರಿಶಿಷ್ಟ ಸ್ಥಾನದಿಂದ ಕರಿಯ, ಸಾಲಗಾರರಲ್ಲದ ಸ್ಥಾನದಿಂದ ಪ್ರೇಮಾ ಗಂಗಾಧರ ಗೌಡ ಕುಂಟಿಕಾನ ಅವರು ಜಯಭೇರಿ ಬಾರಿಸಿದ್ದಾರೆ.
ಆಡಳಿತರೂಢ ಕಾಂಗ್ರೆಸ್‌ಗೆ ಸೋಲುಣಿಸಿದ ಒಳ ಓಟು,ಆಡಳಿತ ವಿರೋಧಿ ಅಲೆ
ಆಡಳಿತರೂಢ ಕಾಂಗ್ರೆಸ್‌ಗೆ ಪಕ್ಷದೊಳಗಿನ ಒಳ ಓಟು ಹಾಗೂ ಆಡಳಿತ ವಿರೋಧಿ ಅಲೆ ಸೋಲಿಗೆ ಪ್ರಮುಖ ಕಾರಣವಾಗಿದೆ. ಕಳೆದ ಬಾರಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂಬ ನಿಟ್ಟಿನಲ್ಲಿ ಕಾರ್ನರ್ ಸಭೆಗಳನ್ನು ನಡೆಸಿದ್ದು, ಸಂಘದ ವ್ಯಾಪ್ತಿಯ ಪಾಲ್ತಾಡಿ ಮತ್ತು ಕೊಳ್ತಿಗೆ ಗ್ರಾಮದಲ್ಲಿ ಸಂಘಟಿತ ಪ್ರಚಾರ ಹಾಗೂ ಪಕ್ಷದೊಳಗಿನ ಮತ ಹೊರಹೋಗದಂತೆ ಮಾಡುವ ಯೋಜನೆ ಯಶಸ್ವಿಯಾಗಿದೆ. ಈ ಮೂಲಕ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಇಬ್ಬರನ್ನೂ ಸೋಲಿಸುವಲ್ಲಿ ಯಶಸ್ವಿಯಾಗಿದೆ.ಅಲ್ಲದೇ ಕಾಂಗ್ರೆಸ್ ಗೆ ಪಕ್ಷೇತರವಾಗಿ ನಿಂತಿದ್ದ ಅಭ್ಯರ್ಥಿಯಿಂದಾಗಿಯೂ ಮತಗಳಿಕೆಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
